ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯಿಂದ ಜಿಲ್ಲಾಮಟ್ಟದ ಪ್ರತಿನಿಧಿಗಳ ಸಭೆ

ಉಡುಪಿ: ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಆಶ್ರಯದಲ್ಲಿ “ಜಿಲ್ಲಾ ಮಟ್ಟದ ಪ್ರತಿನಿಧಿಗಳ ಸಭೆ” ಬ್ರಹ್ಮಗಿರಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆಯಿತು.

ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರ ಹಾಗೂ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ರಾಜ್ಯ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಜ್ಯ ಅಧ್ಯಕ್ಷ ನಾರಾಯಣ ಸ್ವಾಮಿ ಅವರು, ಪಂಚಾಯತ್ ರಾಜ್ಯ ವ್ಯವಸ್ಥೆಯ ಮೂರು ಸ್ತರಗಳಲ್ಲಿ ಜಾತಿ ಮೀಸಲಾತಿ, ಒಳ ಮೀಸಲಾತಿ, ಅಧ್ಯಕ್ಷರಾಗುವ ಮೂಲಕ ನಾವೆಲ್ಲರೂ ಅಧಿಕಾರದಲ್ಲಿ ಇರಬೇಕಾದರೆ ಇದಕ್ಕೆ ಪ್ರಮುಖ ಕಾರಣರಾದವರು ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿಯವರು. ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸುರವರು ಅಧಿಕಾರದಲ್ಲಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳನ್ನು ನಾಡಿನ ಸಮಸ್ತ ಜನತೆಗೆ ನೀಡಿದರು. ಆದ್ದರಿಂದ ಅವರನ್ನು ಹಿಂದುಳಿದ ವರ್ಗಗಳ ಅಭಿವೃದ್ಧಿಯ ಹರಿಕಾರ ಎಂದು ಹೇಳುತ್ತಾರೆ ಎಂದರು.

ಹಾಗೆಯೇ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯನ್ನು ಗ್ರಾಮೀಣ ಪ್ರದೇಶದಲ್ಲಿ ಆರಂಭಿಸಲಾಗುವುದು ಎಂದು ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಸಲಹೆಗಾರರಾದ ವಿ.ವೈ. ಘೋರ್ಪಡೆ ಮಾತನಾಡಿ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕರು, ತರಬೇತಿಯನ್ನು ಪಡೆದುಕೊಂಡು ತಮ್ಮ ತಮ್ಮ ಗ್ರಾಮ ಪಂಚಾಯತ್‌ನಲ್ಲಿ ಸಿಗುವ ಸೌಲಭ್ಯಗಳನ್ನು ಗ್ರಾಮಸ್ಥರಿಗೆ ತಲುಪಿಸಬೇಕು. ಹಾಗೆಯೇ ಕೆಳಹಂತದಲ್ಲಿ ಪಕ್ಷವನ್ನು ಸಂಘಟಿಸುವ ಜೊತೆಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ರಾಷ್ಟ್ರೀಯ ಸಲಹೆಗಾರರಾದ ಡಿ.ಆರ್. ಪಾಟೀಲ್‌ ಮಾತನಾಡಿ, ಗಾಂಧಿಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗಲು ಗ್ರಾಮ ಮಟ್ಟದಿಂದಲೇ ಅಧಿಕಾರ ಚಲಾವಣೆ ಆಗಬೇಕು. ಈಗ ಶಾಸಕರ ಹಿಡಿತದಲ್ಲಿ ಅಧಿಕಾರವಿದ್ದು ಅದು ಗ್ರಾ.ಪಂ. ಮಟ್ಟಕ್ಕೆ ತಲುಪಲು ಯೋಜನೆ ರೂಪಿಸಿದ್ದೇವೆ ಎಂದರು.

ಉಡುಪಿ ಜಿಲ್ಲಾ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕಿ ರೋಶನಿ ಒಲಿವರ್‌ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಭಾಸ್ಕರ್ ಪೂಜಾರಿ ಅವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೋಟ ಬ್ಲಾಕ್‌ನ ಸಂಯೋಜಕರನ್ನಾಗಿ ನೇಮಕ ಮಾಡಲಾಯಿತು.

ಸಭೆಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ರಾಜ್ಯ ಆರ್.ಜಿ.ಪಿ.ಆರ್.ಎಸ್.ನ ಸಂಚಾಲಕ ವಿಜಯ ಸಿಂಗ್, ಎಐಸಿಸಿ ಕಾರ್ಯದರ್ಶಿ ಬಿ. ಎಂ. ಸಂದೀಪ್, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ. ಪ್ಯಾನಲಿಸ್ಟ್ ವೆರೋನಿಕಾ ಕರ್ನೇಲಿಯೋ, ನವೀನ್ ಕೊಪ್ಪ, ಗೀತಾ ವಾಗ್ಳೆ, ಮಲ್ಯಾಡಿ ಶಿವರಾಮ್ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್, ಹರೀಶ್ ಕಿಣಿ, ಅಣ್ಣಯ್ಯ ಸೇರಿಗಾರ್, ರಮೇಶ್ ಕಾಂಚನ್, ಸತೀಶ್ ಅಮೀನ್ ಪಡುಕೆರೆ, ಮೇರಿ ಡಿ’ಸೋಜಾ, ಶಂಕರ್ ಕುಂದರ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ದಿನಕರ್ ಹೇರೂರು, ಭಾಸ್ಕರ್ ರಾವ್ ಕಿದಿಯೂರು, ದೀಪಕ್ ಕೋಟ್ಯಾನ್, ಶಶಿಧರ ಶೆಟ್ಟಿ ಎಲ್ಲೂರು, ಹರೀಶ್ ಶೆಟ್ಟಿ ಪಾಂಗಾಳ, ಇಸ್ಮಾಯಿಲ್ ಆತ್ರಾಡಿ, ಕಾಂಗ್ರೆಸ್ ಮುಖಂಡರುಗಳು ಕಾರ್ಯಕರ್ತರು, ಆರ್.ಜಿ.ಪಿ.ಆರ್.ಎಸ್.ನ ಸಂಯೋಜಕರುಗಳು ಉಪಸ್ಥಿತರಿದ್ದರು. ಡಾ. ಸುನೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.