ಉಡುಪಿ: ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ 2021 ರ ಸೆಕ್ಷನ್ 56(1) 58 ಮತ್ತು 61 ರ ಅಡಿಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಸೋಮವಾರ ನಗರದ ಮಣಿಪಾಲ ರಜತಾದ್ರಿಯ ತಮ್ಮ ಕಚೇರಿಯಲ್ಲಿ ಬೆಂಗಳೂರು, ಆಂಧ್ರಪ್ರದೇಶ (ತೆಲಂಗಾಣ) ಹಾಗೂ ಉಡುಪಿ ಜಿಲ್ಲೆಯ ದಂಪತಿಗಳಿಗೆ ಒಟ್ಟು 3 ಮಕ್ಕಳ ಅಂತಿಮ ದತ್ತು ಆದೇಶವನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ದತ್ತು ಪ್ರಕ್ರಿಯೆಯು ಕಾನೂನು ಬದ್ಧವಾಗಿ, ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ, ಪೋಷಕರನ್ನು ಕಳೆದುಕೊಂಡ, ಪಾಲನೆ ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಮಾತ್ರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಮುಕ್ತ ಆದೇಶ ಪಡೆದು ದತ್ತು ನೀಡಲು ಅರ್ಹರಾಗಿರುತ್ತಾರೆ ಎಂದರು.
ದತ್ತು ಪಡೆಯಲು ಇಚ್ಛಿಸುವ ದಂಪತಿಗಳು ಕಾನೂನು ಬದ್ಧವಾಗಿ ದತ್ತು ಪ್ರಕ್ರಿಯೆ ಮೂಲಕ ದತ್ತು ಪಡೆಯಬೇಕು. ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ ಪರಿತ್ಯಕ್ತ ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದಾಗಿದೆ. ಜಿಲ್ಲೆಯ ಸಂತೆಕಟ್ಟೆಯ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ ಹಾಗೂ ಬಿ.ಆರ್.ಶೆಟ್ಟಿ ಆಸ್ಪತ್ರೆ ಇಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದ ಅವರು, ಕಾನೂನು ಉಲ್ಲಂಘಿಸಿ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿಯವರು ಶಾಮೀಲಾಗಿದ್ದಲ್ಲಿ 1 ಲಕ್ಷ ರೂಪಾಯಿ ದಂಡ ಹಾಗೂ 7 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡುಕೊAಡವರಿಗೆ 1 ಲಕ್ಷ ದಂಡ ಹಾಗೂ 5 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ರಕ್ಷಣಾಧಿಕಾರಿಗಳಾದ ಸುರಕ್ಷಾ ಹಾಗೂ ಮಹೇಶ್ ದೇವಾಡಿಗ, ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರದ ವೃಂದಾ ಉಪಸ್ಥಿತರಿದ್ದರು.
ದತ್ತು ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ https://missionvatsalya.wcd.gov.in ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಛೇರಿ, ದೂರವಾಣಿ ಸಂಖ್ಯೆ: 0820-2574964 ಮತ್ತು ಸಂತೆಕಟ್ಟೆಯ ಶ್ರೀ ಕೃಷ್ಣಾನುಗೃಹ ವಿಶೇಷ ದತ್ತು ಕೇಂದ್ರ ದೂರವಾಣಿ ಸಂಖ್ಯೆ: 9880442640 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

















