ಆಂಧ್ರ ಸರ್ಕಾರದ ಆದೇಶ ರದ್ದುಗೊಳಿಸಿದ ಜಿಲ್ಲಾ ಕೋರ್ಟ್​ : ಮಾರ್ಗದರ್ಶಿ ಚಿಟ್​ಫಂಡ್​ ಆಸ್ತಿ ಜಪ್ತಿ

ಹೈದರಾಬಾದ್​: ಮೇ 29ರ ಜಿಒ 104, ಜೂನ್ 15ರ ಜಿಒ 116 ಮತ್ತು ಜುಲೈ 27 ರ ಜಿಒ 134ರ ಪ್ರಕಾರ 1,050 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಿಐಡಿಗೆ ಸರ್ಕಾರ ಅನುಮತಿ ನೀಡಿತ್ತು. ಈ ಕುರಿತ ಅರ್ಜಿಗಳನ್ನು ಗುಂಟೂರು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ವೈ.ವಿ.ಎಸ್.ಬಿ.ಜಿ. ಪಾರ್ಥಸಾರಥಿ ಅವರಿದ್ದ ಪೀಠ ವಿಚಾರಣೆ ನಡೆಸಿತು.

ಗ್ರಾಹಕರಿಗೆ ಪಾರದರ್ಶಕ ಸೇವೆ ನೀಡುತ್ತಿರುವ ಮಾರ್ಗದರ್ಶಿ ಚಿಟ್​ಫಂಡ್‌ನ 1,050 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲು ಕೋರಿ ಆಂಧ್ರಪ್ರದೇಶ ಸಿಐಡಿ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ಗುಂಟೂರು ಪ್ರಧಾನ ಜಿಲ್ಲಾ ನ್ಯಾಯಾಲಯ ರದ್ದುಗೊಳಿಸಿದೆ.ಮಾರ್ಗದರ್ಶಿ ಚಿಟ್​ಫಂಡ್​ ಕೇಸ್​ನಲ್ಲಿ ಆಂಧ್ರಪ್ರದೇಶದ ಸಿಐಡಿಗೆ ಮತ್ತೊಂದು ಹಿನ್ನಡೆಯಾಗಿದೆ. ಕಂಪನಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಕೋರಿದ್ದ ಅರ್ಜಿಗಳನ್ನು ಅಲ್ಲಿನ ಜಿಲ್ಲಾ ಕೋರ್ಟ್​ ವಜಾ ಮಾಡಿದೆ. ಮಾರ್ಗದರ್ಶಿ ಕಂಪನಿ ತನ್ನ ಚಂದಾದಾರರಿಗೆ ಮೆಚ್ಯೂರಿಟಿ ಹಣ ಪಾವತಿಸಲು ಸಾಧ್ಯವಾಗಿಲ್ಲ ಎಂಬುದನ್ನು ಸಾಬೀತುಪಡಿಸುವಲ್ಲಿ ಸಿಐಡಿ ವಿಫಲವಾಗಿದೆ ಎಂದಿರುವ ನ್ಯಾಯಾಲಯ ಅರ್ಜಿಗಳನ್ನು ತಿರಸ್ಕರಿಸಿದೆ.

ಸರ್ಕಾರ ಮತ್ತು ಸಿಐಡಿ ಚಂದಾದಾರರನ್ನು ರಕ್ಷಿಸುವ ನೆಪದಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದೆ. ಆದರೆ, ಮಾರ್ಗದರ್ಶಿಯ ವ್ಯಾಪಾರ ಚಟುವಟಿಕೆಗಳು ಚಿಟ್ ಫಂಡ್ ನಿಯಮಗಳಿಗೆ ಒಳಪಟ್ಟಿವೆ ಎಂದು ವಕೀಲರು ಕೋರ್ಟ್​ ಗಮನಕ್ಕೆ ತಂದರು.
ಚಂದಾದಾರರು ದೂರು ನೀಡಿಲ್ಲ: ಮಾರ್ಗದರ್ಶಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪೋಸಾನಿ ವೆಂಕಟೇಶ್ವರಲು ಮತ್ತು ವಕೀಲ ಪಿ ರಾಜಾರಾವ್ ಅವರು, ಯಾವುದೇ ಚಂದಾದಾರರು ತಮಗೆ ಸಿಗಬೇಕಿದ್ದ ಹಣ ವಾಪಸ್​ ಬಂದಿಲ್ಲ ಎಂದು ದೂರು ನೀಡಿಲ್ಲ. ಹೀಗಿದ್ದಾಗ, ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ವಾದಿಸಿದರು.

ಉಭಯ ಪರ ವಾದಗಳನ್ನು ಆಲಿಸಿದ ಬಳಿಕ ನ್ಯಾಯಾಧೀಶರು, ಚಂದಾದಾರರಿಗೆ ಹಣ ಪಾವತಿಸುವಲ್ಲಿ ಮಾರ್ಗದರ್ಶಿ ವಿಫಲವಾಗಿದೆ ಎಂಬುದನ್ನು ಸಾಬೀತುಪಡಿಸಲು ಸಿಐಡಿಗೆ ಸಾಧ್ಯವಾಗಿಲ್ಲ ಎಂದರು. ಇದೇ ಕಾರಣವನ್ನು ಉಲ್ಲೇಖಿಸಿ ಸರ್ಕಾರದ ಹಿಂದಿನ ಜಿಒಗಳನ್ನು ನ್ಯಾಯಾಲಯ ರದ್ದುಗೊಳಿಸಿದೆ. ಈ ಕುರಿತು ಸಲ್ಲಿಸಲಾಗಿದ್ದ ಮೂರು ಅರ್ಜಿಗಳನ್ನು ಕೋರ್ಟ್​ ವಜಾಗೊಳಿಸಿದೆ.

ಸಾಕ್ಷ್ಯಾಧಾರಗಳ ಕೊರತೆ: ಮಾರ್ಗದರ್ಶಿ ಚಿಟ್​ಫಂಡ್​ ತನ್ನ ಚಂದಾದಾರರಿಗೆ ಹಣವನ್ನು ಪಾವತಿಸಲು ವಿಫಲವಾಗಿದೆ ಎಂಬ ಬಗ್ಗೆ ಸಿಐಡಿ ನ್ಯಾಯಾಲಯಕ್ಕೆ ಸೂಕ್ತ ಸಾಕ್ಷಿಗಳನ್ನು ನೀಡಿಲ್ಲ. ಹೀಗಾಗಿ ಸರ್ಕಾರಕ್ಕೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಅಧಿಕಾರವಿಲ್ಲ. ಸಿಐಡಿ ಅರ್ಜಿಗಳನ್ನು ರದ್ದು ಮಾಡಬೇಕು ಎಂದು ಮಾರ್ಗದರ್ಶಿ ಪರ ವಕೀಲರು ನ್ಯಾಯಾಲಯವನ್ನು ಕೋರಿದರು. ಮತ್ತೊಂದೆಡೆ ಸಿಐಡಿ ವಕೀಲರು, ಚಂದಾದಾರರ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಕಂಪನಿಯ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ವಾದಿಸಿದರು.

ಕಂಪನಿಯಿಂದ ತನ್ನ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಹೀಗಿದ್ದಾಗ ಕಂಪನಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದರಿಂದ ಚಂದಾದಾರರಿಗೆ ಅನಾನುಕೂಲ ಆಗುತ್ತದೆ. ಮಾರ್ಗದರ್ಶಿ ಕಂಪನಿ ನಾಲ್ಕು ರಾಜ್ಯಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದೆ. ಬೇರೆ ಯಾವ ರಾಜ್ಯಗಳಲ್ಲಿ ಆಗದ ಸಮಸ್ಯೆ ಆಂಧ್ರಪ್ರದೇಶದಲ್ಲಿ ಉದ್ಭವಿಸಿದೆ ಎಂಬ ಆರೋಪ ದುರುದ್ದೇಶದಿಂದ ಕೂಡಿದ್ದು ಎಂದು ವಾದಿಸಿದರು.ಆಸ್ತಿ ಜಪ್ತಿಗಾಗಿ ಕೇಸ್​: ಹಾಗೊಂದು ವೇಳೆ ಚಿಟ್‌ಗಳ ನಿರ್ವಹಣೆಯಲ್ಲಿ ಲೋಪ ಕಂಡುಬಂದರೆ, ಅವುಗಳನ್ನು ಚಿಟ್ ಫಂಡ್ ಕಾಯಿದೆ ನಿಯಮಗಳ ಪ್ರಕಾರ ವಿಚಾರಣೆ ನಡೆಸಬೇಕು. ಬದಲಿಗೆ, ಸಿಐಡಿ ಅಧಿಕಾರಿಗಳು ಪ್ರೊಟೆಕ್ಷನ್ ಆಫ್ ಫೈನಾನ್ಷಿಯಲ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್ (ಎಪಿ ಡಿಪಾಸಿಟರ್ಸ್ ಆಕ್ಟ್-1999) ಪ್ರಕಾರ ಕೇಸ್​ ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದೇ ಇದರ ಹಿಂದಿನ ಉದ್ದೇಶ ಎಂದು ವಕೀಲರು ಆರೋಪಿಸಿದರು.