ನ್ಯುಮೋನಿಯಾದಿಂದುಂಟಾಗುವ ಮಕ್ಕಳ ಸಾವಿನ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಜಿಲ್ಲಾಧಿಕಾರಿ ಕರೆ

ಉಡುಪಿ: ಜಿಲ್ಲೆಯಲ್ಲಿ 5 ವರ್ಷದೊಳಗಿನ ಮಕ್ಕಳು ನ್ಯುಮೋನಿಯಾ ಕಾರಣದಿಂದ ಮರಣ ಹೊಂದದಂತೆ ಎಲ್ಲ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಮುಂಜಾಗ್ರತೆ ವಹಿಸಬೇಕು. ಮಕ್ಕಳಲ್ಲಿನ ಈ ಸಮಸ್ಯೆಯನ್ನು ಬೇಗನೆ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಪೋಷಕರಿಗೆ ಈ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ನ್ಯುಮೋನಿಯಾದಿಂದ ಆಗುವ ಮಕ್ಕಳ ಸಾವಿನ ಪ್ರಕರಣಗಳನ್ನು ಶೂನ್ಯಕ್ಕೆ ತರಲು ಎಲ್ಲರೂ ಕಾರ್ಯ ಪ್ರವೃತ್ತರಾಗುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕರೆ ನೀಡಿದರು.

ಅವರು ಇಂದು ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ, ನ್ಯುಮೋನಿಯಾವನ್ನು ಯಶಸ್ವಿಯಾಗಿ ಕೊನೆಗಾಳಿಸಲು ಸಾಮಾಜಿಕ ಜಾಗೃತಿ ಮತ್ತು ಕ್ರಿಯಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳ ಶ್ವಾಸಕೋಶದಲ್ಲಿ ರೋಗಾಣುಗಳು ಉಲ್ಬಣವಾಗುವುದರಿಂದ ನ್ಯುಮೋನಿಯಾ ಆಗುತ್ತದೆ. ಇದರಿಂದ ದೇಶದಲ್ಲಿ 5 ವರ್ಷದೊಳಗಿನ ಮಕ್ಕಳು ಮರಣ ಹೊಂದುವ ಪ್ರಮಾಣ ಅಧಿಕವಾಗಿದೆ. ಈ ರೋಗ ಲಕ್ಷಣಗಳ ಬಗ್ಗೆ ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಿ ಪ್ರಾರಂಭಿಕ ಹಂತದಲ್ಲಿ ಇದನ್ನು ಗುರುತಿಸಿ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಬಹುದಾಗಿದ್ದು, ಅಂಗನವಾಡಿಗಳಿಗೆ ಬರುವ ಮಕ್ಕಳಲ್ಲಿ ಮತ್ತು ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡುವ ಸಂದರ್ಭದಲ್ಲಿ ಕೆಮ್ಮು ಉಸಿರಾಟ ಸಮಸ್ಯೆಯಿರುವ ಮಕ್ಕಳು ಕಂಡುಬಂದಲ್ಲಿ ಕೂಡಲೇ ಸಮೀಪದ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡುವಂತೆ ತಿಳಿಸಿದರು.

ಜಿಲ್ಲೆಯಲ್ಲಿ ನವೆಂಬರ್ 12 ರಿಂದ 2023 ರ ಫೆಬ್ರವರಿ 28 ರ ವರೆಗೆ ನಡೆಯುವ ಈ ಅಭಿಯಾನದಲ್ಲಿ ಹೆಚ್ಚಿನ ಅರಿವು ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು, ಎಲ್ಲಾ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು, ಸ್ವಯಂ ಸೇವಾ ಸಂಘಟನೆಗಳ ಸಹಕಾರ ಪಡೆಯುವುದರ ಜೊತೆಗೆ ಮನೆಗಳಲ್ಲಿ ಹೊಗೆ ರಹಿತ ಅಡುಗೆ ಮಾಡುವ ಬಗ್ಗೆ, ಕೈ ತೊಳೆಯುವ ವಿಧಾನ , ಸ್ವಚ್ಚತೆ ಹಾಗೂ ಶುದ್ದ ಕುಡಿಯುವ ನೀರಿನ ಬಗ್ಗೆ ಕೂಡಾ ಅರಿವು ಮೂಡಿಸಬೇಕು ಎಂದರು.

ನ್ಯುಮೋನಿಯಾ ರೋಗ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯ ಡಾ.ಮಹದೇವ ಭಟ್, 5 ವರ್ಷದೊಳಗಿನ ಮಕ್ಕಳಲ್ಲಿ ನ್ಯುಮೋನಿಯಾ ರೋಗ ಲಕ್ಷಣಗಳಾದ ಕೆಮ್ಮು, ನೆಗಡಿ, ಉಸಿರಾಟದ ತೊಂದರೆ, ಉಸಿರಾಡುವ ಸಂದರ್ಭದಲ್ಲಿ ಪಕ್ಕೆ ಅಥವಾ ಎದೆಯ ಕೆಳಗೆ ಸೆಳೆತ, ಸಾಮಾನ್ಯಕ್ಕಿಂತ ಹೆಚ್ಚಿನ ವೇಗದ ಉಸಿರಾಟ ಲಕ್ಷಣಗಳು ಇದ್ದಲ್ಲಿ ವೈದ್ಯರನ್ನು ಸಂಪರ್ಕಿಸುವಂತೆ ಮತ್ತು ಮಗುವನ್ನು ಬೆಚ್ಚಗಿಡುವುದುಮ ಮೈ ತುಂಬಾ ಬಟ್ಟೆ ಹಾಕುವುದು ಹಾಗೂ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ನ್ಯುಮೋನಿಯಾ ತಡೆಗಟ್ಟುವ ಲಸಿಕೆಯನ್ನು ಕೊಡಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜಗೋಪಾಲ ಭಂಡಾರಿ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ ಉಪಸ್ಥಿತರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಪ್ರಭಾರ) ಡಾ.ರಾಮರಾವ್ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್ ವಂದಿಸಿದರು. ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಡಾ.ಎಂ.ಜಿ.ರಾಮ ನಿರೂಪಿಸಿದರು.