ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆಗೆ ಕೇಂದ್ರದ ಅನುಮೋದನೆ: ಜಿಲ್ಲಾ ಬಿಜೆಪಿ ಅಭಿನಂದನೆ

ಉಡುಪಿ: ರಾಜ್ಯದ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುತ್ತಿರುವ ಸ್ಥಳೀಯ ಕುಚ್ಚಲಕ್ಕಿ ಪ್ರಭೇದಗಳಾದ ಎಂಒ4, ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ, ಉಮ ಮತ್ತು ಅಭಿಲಾಷ್ ತಳಿಗಳನ್ನು ಕೇಂದ್ರ ಸರಕಾರದ ಕನಿಷ್ಠ ಬೆಂಬಲ ಬೆಲೆಯಡಿ ಖರೀದಿಸಿ ಕರಾವಳಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪಡಿತರ ಮೂಲಕ ವಿತರಿಸಲು ಅನುಮತಿ ನೀಡಿರುವ ಕೇಂದ್ರ ಸರಕಾರದ ಕ್ರಮವನ್ನು ಉಡುಪಿ ಜಿಲ್ಲಾ ಬಿಜೆಪಿ ಸ್ವಾಗತಿಸಿದೆ.

ಉಡುಪಿ, ದ.ಕ., ಉತ್ತರ ಕನ್ನಡ ಜಿಲ್ಲೆಗಳ ಜನತೆಯ ಬೇಡಿಕೆಯಂತೆ ಕರ್ನಾಟಕ ಸರಕಾರವು ಕೇಂದ್ರ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಯನ್ನು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ ಸಚಿವ ಪಿಯೂಷ್ ಗೋಯಲ್ ರವರ ಮೂಲಕ ಅನುಮೋದಿಸುವಂತೆ ಹೆಚ್ಚಿನ ಮುತುರ್ವಜಿ ವಹಿಸಿ, ಕರಾವಳಿ ಜಿಲ್ಲೆಗಳಿಗೆ ಪಡಿತರದಲ್ಲಿ‌ ಸ್ಥಳೀಯ ಕುಚ್ಚಲಕ್ಕಿ ವಿತರಣಾ ವ್ಯವಸ್ಥೆಗೆ ಕೇಂದ್ರ ಸರಕಾರ‌ದ ಅನುಮತಿಗೆ ಶ್ರಮಿಸಿದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರ ಪ್ರಾಮಾಣಿಕ ಪ್ರಯತ್ನ ಅಭಿನಂದನಾರ್ಹ ಎಂದು ಬಿಜೆಪಿ ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ ತಿಳಿಸಿದ್ದಾರೆ.

ಕೇಂದ್ರ ಸರಕಾರಕ್ಕೆ ರಾಜ್ಯದಿಂದ ಪ್ರಸ್ತಾವನೆ ಸಲ್ಲಿಸುವ‌ ನಿಟ್ಟಿನಲ್ಲಿ ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ‌ ಹಾಗೂ ಕರ್ನಾಟಕ ರಾಜ್ಯ ಆಹಾರ ನಿಗಮದ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಹಾಗೂ ಜನಪ್ರತಿನಿಧಿಗಳ ಸತತ ಪ್ರಯತ್ನವೂ ಶ್ಲಾಘನೀಯ.

ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ಅನ್ನ ಭಾಗ್ಯ ಯೋಜನೆ ಮೂಲಕ ನೀಡುತ್ತಿರುವ ಪಡಿತರದಲ್ಲಿ ಕರಾವಳಿ ಜಿಲ್ಲೆಯ ಜನತೆಗೆ ಪ್ರಿಯವಾಗಿರುವ ಸ್ಥಳೀಯ ಕುಚ್ಚಲಕ್ಕಿಯನ್ನೇ ವಿತರಿಸಲು ಮುಂದಾಗಿರುವ ಐತಿಹಾಸಿಕ ಕ್ರಮ ಕರಾವಳಿಗರಿಗೆ ಹಿತವೆನಿಸಲಿದೆ. ಜೊತೆಗೆ ಉಡುಪಿ, ದ.ಕ., ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುವ ವಿವಿಧ ಪ್ರಭೇದಗಳ‌ ಸ್ಥಳೀಯ ಕುಚ್ಚಲಕ್ಕಿಯನ್ನು ಕನಿಷ್ಠ ಬೆಂಬಲ ಬೆಲೆಯ ಮೂಲಕ ಖರೀದಿಸುವ ಪ್ರಕ್ರಿಯೆ ರೈತಾಪಿ ವರ್ಗದಲ್ಲಿ ಹೊಸ ಭರವಸೆ ಮೂಡಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.