ಶಾಸಕ ಹರೀಶ್ ಪೂಂಜಾಗೆ ಜೀವ ಬೆದರಿಕೆ: ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಜಿಲ್ಲಾ ಬಿಜೆಪಿ ಒತ್ತಾಯ

ಉಡುಪಿ: ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರ ವಾಹನ ತಡೆದು, ತಲವಾರು ಝಳಪಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಒಡ್ಡಿರುವ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸುವಂತೆ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಮತ್ತು ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.

ಕರಾವಳಿ ಜಿಲ್ಲೆಯು ಅನೇಕ ದಿನಗಳಿಂದ ಶಾಂತಿಯ ವಾತಾವರಣದಲ್ಲಿದ್ದು, ಕೆಲವು ಶಕ್ತಿಗಳು ಅಶಾಂತಿ ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ, ಪಕ್ಷದ ಶಾಸಕರಾದ ಹರೀಶ್ ಪೂಂಜಾ ರವರು ನಿನ್ನೆ ರಾತ್ರಿ ಊರಿಗೆ ವಾಪಾಸು ಬರುತ್ತಿದ್ದ ಸಂದರ್ಭ ಕಾರಿಗೆ ಅಡ್ಡಹಾಕಿ ಚಾಲಕನಿಗೆ ತಲವಾರು ತೋರಿಸಿ ಬೆದರಿಸಿದ್ದು ಖಂಡನೀಯ. ಇಂತಹ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ತಕ್ಷಣ ಅಪರಾಧಿಗಳನ್ನು ಬಂಧಿಸಿ ಸಮಾಜಘಾತಕರ ಮೇಲೆ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆಯನ್ನು ಒತ್ತಾಯಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂ ಪರ ನಾಯಕ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ನಡೆದ ದಾಳಿ ಯತ್ನವನ್ನು ಖಂಡಿಸಿರುವ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಕೂಡಾ ಆರೋಪಿಗಳ ಶೀಘ್ರ ಬಂಧನಕ್ಕೆ ತುರ್ತು ಕ್ರಮ ಜರಗಿಸುವಂತೆ ರಾಜ್ಯ ಗೃಹ ಇಲಾಖೆಯನ್ನು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಕೇಂದ್ರ ಸರಕಾರ ಪಿ.ಎಫ್.ಐ ಸಹಿತ ಒಂಬತ್ತು ಮತಾಂಧ ಭಯೋತ್ಪಾದಕ ದೇಶದ್ರೋಹಿ ಜಿಹಾದಿ ಸಂಘಟನೆಗಳನ್ನು ನಿಷೇಧಿಸಿರುವ ಕ್ರಮದಿಂದ ಕಂಗೆಟ್ಟಿರುವ ಜಿಹಾದಿ ಮನಸ್ಥಿತಿಯ ದುಷ್ಟಶಕ್ತಿಗಳು ಅಟ್ಟಹಾಸವನ್ನು ಮೆರೆಯಲು ಇಂತಹ ನಪುಂಸಕ ಕೃತ್ಯದಲ್ಲಿ ತೊಡಗಿವೆ.

ಮಂಗಳೂರಿನಿಂದ ಪಡೀಲ್ ಮಾರ್ಗವಾಗಿ ಕಾರಿನಲ್ಲಿ ತೆರಳುವ ಸಂದರ್ಭದಲ್ಲಿ ಅ.13ರ ತಡ ರಾತ್ರಿ ಈ ದುಷ್ಕೃತ್ಯ ನಡೆದಿದ್ದು, ಜಿಹಾದಿಗಳ ಕಾರಿನ ನೋಂದಣಿ ಕೇರಳ ರಾಜ್ಯದ್ದಾಗಿದೆ ಎಂದು ತಿಳಿದು ಬಂದಿದೆ.

ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಪ್ರಕರಣವನ್ನು ಗಂಭೀರವಾಗಿ‌ ಪರಿಗಣಿಸಿ ಶಾಸಕ ಹರೀಶ್ ಪೂಂಜಾರವರಿಗೆ ಸೂಕ್ತ ಭದ್ರತೆ ಒದಗಿಸುವ ಜೊತೆಗೆ ಮತಾಂಧ ಜಿಹಾದಿ ಮಾನಸಿಕತೆಯ ಇಂತಹ ಭಯೋತ್ಪಾದಕ ಸಮಾಜಘಾತುಕ ಶಕ್ತಿಗಳ ಹೆಡೆಮುರಿಕಟ್ಟಲು ಶೀಘ್ರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕುಯಿಲಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.