ಕಾಂಗ್ರೆಸ್ ಆಡಳಿತಾವಧಿಯಲ್ಲಿ ಹಿಂದೂಗಳ ಅಮಾನುಷ ಹತ್ಯೆ ಖಂಡನೀಯ: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೊಲೆ ಗಡುಕರಿಗೆ, ಭಯೋತ್ಪಾದಕರಿಗೆ ಬಲ ನೀಡಿದಂತೆ ಎಂಬುದಕ್ಕೆ ಕಾಂಗ್ರೆಸ್ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಎರಡೇ ತಿಂಗಳಲ್ಲಿ ರಾಜ್ಯದಲ್ಲಿ ಜೈನ ಮುನಿ ಮತ್ತು ಹಿಂದೂ ಕಾರ್ಯಕರ್ತನ ಅಮಾನುಷ ಹತ್ಯೆ ನಡೆದಿರುವುದು ಜ್ವಲಂತ ನಿದರ್ಶನವಾಗಿದೆ. ಹಂತಕರಿಗೆ ಕಾನೂನಿನ ಭಯವಿಲ್ಲದೆ ಇಂತಹ ಭೀಕರ ಕೊಲೆಗಳು ನಿರಂತರ ನಡೆಯುತ್ತಿರುವುದು ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ‌ ಜೈನ ಮುನಿ ಕಾಮಕುಮಾರ ನಂದಿ ಮಹಾರಾಜ್ ರವರ ಅಮಾನುಷ ಹತ್ಯೆ ಮತ್ತು ಟಿ.ನರಸೀಪುರದಲ್ಲಿ ನಡೆದ ಹಿಂದೂ ಕಾರ್ಯಕರ್ತ ವೇಣುಗೋಪಾಲ್
ಕೊಲೆಯನ್ನು ಖಂಡಿಸಿ, ಬಿಜೆಪಿ ಉಡುಪಿ ಜಿಲ್ಲೆ ಮತ್ತು ಉಡುಪಿ ನಗರ ಮಂಡಲದ ವತಿಯಿಂದ ಬಿಜೆಪಿ ಜಿಲ್ಲಾ ಕಛೇರಿಯ ಬಳಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಜೈನ ಮುನಿ ಕೊಲೆ, ಹಿಂದೂ ಕಾರ್ಯಕರ್ತರ ಹತ್ಯೆಯಂತಹ ಸಮಾಜ ಕಂಟಕ ಹೇಯ ಕೃತ್ಯಗಳನ್ನು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ. ‘ಅಲ್ಲಾನ ಕೃಪೆಯಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ’ ಎಂದಿರುವ ಗೃಹ ಸಚಿವ ಪರಮೇಶ್ವರ್ ಹೇಳಿಕೆಯಂತೆ ಕಾಂಗ್ರೆಸ್ ಸರಕಾರ ಈ ಋಣ ತೀರಿಸುವ ನಿಟ್ಟಿನಲ್ಲಿ ಹಿಂದೂ ವಿರೋಧಿ ಕೃತ್ಯ ಎಸಗುತ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಇದರ ವ್ಯತಿರಿಕ್ತ ಪರಿಣಾಮದ ಫಲ ಉಣ್ಣಲಿದೆ ಎಂದು ಅವರು ಹೇಳಿದರು.

ರಾಜ್ಯದೆಲ್ಲೆಡೆ ಗೋಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಲಂಚದ ಮೂಲಕ ವರ್ಗಾವಣೆ ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಮರ ಹಬ್ಬಕ್ಕೆ ಹೋಗಿ ಸಂತೋಷದಿಂದ ಟೋಪಿ ಶಾಲು ಧರಿಸಿದರೆ, ಧರ್ಮಸ್ಥಳ ಸಂಸ್ಥೆಯ ಕಾರ್ಯಕ್ರಮದಲ್ಲಿ ಸನ್ಮಾನವನ್ನು ತಿರಸ್ಕರಿಸುವ ಜೊತೆಗೆ ಕೇಸರಿ ಶಾಲು, ನಾಮ ಕಂಡರೆ ಕೆಂಡಕಾರುವ ಮೂಲಕ ತಾನು ಎಂತಹ ಮಹಾನ್ ಹಿಂದೂ ವಿರೋಧಿ ಎಂಬುದನ್ನು ಸಾಬೀತುಪಡಿಸಿದ್ದಾರೆ. ಈ ವಿದ್ಯಮಾನಗಳನ್ನು ಅವಲೋಕಿಸಿದಾಗ ರಾಜ್ಯದಲ್ಲಿ ಮುಂದೆ ಭಯಾನಕ ಪರಿಸ್ಥಿತಿ ತಲೆದೋರುವುದು ನಿಶ್ಚಿತ ಎಂದು ಕಂಡುಬರುತ್ತಿದೆ. ಈ ಎರಡೂ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿ ಸಿಬಿಐ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆ ಹೊರಬರುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ತಪ್ಪಿದಲ್ಲಿ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾದೀತು ಎಂದು ಕುಯಿಲಾಡಿ ಎಚ್ಚರಿಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ ಮಾತನಾಡಿ, ಇಂದು ಕೊಲೆಗಡುಕ ಸರಕಾರ ರಾಜ್ಯದಲ್ಲಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಕಗ್ಗೊಲೆ ಈಗಾಗಲೇ ರಾಜ್ಯದಲ್ಲಿ ಮರುಕಳಿಸಿರುವುದು ಪಶ್ಚಿಮ ಬಂಗಾಲದ ಕರಾಳ ಇತಿಹಾಸ ಕರ್ನಾಟಕದಲ್ಲೂ ಮರುಕಳಿಸುವ ಹುನ್ನಾರ ನಡೆಯುತ್ತಿರುವಂತೆ ಭಾಸವಾಗುತ್ತಿದೆ. ರಾಜ್ಯದಲ್ಲಿ ನಡೆದ ಜೈನ ಮುನಿಗಳ ಬರ್ಬರ ಹತ್ಯೆ ಪ್ರಕರಣದಲ್ಲಿ ನಾರಾಯಣ ಮಾಲಿ ಮತ್ತು ಹಸನ್ ಸಾಬಿ ಎಂಬವರು ಆರೋಪಿಗಳು ಎಂಬ ವಿಚಾರ ಜಗಜ್ಜಾಹೀರಾಗಿದ್ದರೂ ಕೂಡಾ ಗೃಹ ಮತ್ತು ಪೊಲೀಸ್ ಇಲಾಖೆ ಎಲ್ಲಿಯೂ ಕೂಡಾ ಅಲ್ಪಸಂಖ್ಯಾತ ಸಮುದಾಯದ ಆರೋಪಿಯ ಹೆಸರನ್ನು ಎತ್ತದೇ ಸಮಾಜದ ದಾರಿ ತಪ್ಪಿಸುತ್ತಿರುವುದು ಖಂಡನೀಯ. ಜೈನ ಮುನಿಗಳು ಯಾವ ರೀತಿಯ ಕಟ್ಟು ಪಾಡುಗಳನ್ನು ಅನುಸರಿಸುವ ಮಹಾನ್ ತಪಸ್ವಿಗಳು ಎಂಬುದನ್ನು ಊಹಿಸಲಸಾಧ್ಯ. ಇಂತಹ ಸನ್ನಿವೇಶದಲ್ಲಿ ಪ್ರಕರಣದ ಬಗ್ಗೆ ದಿವ್ಯ ನಿಲಕ್ಷ ವಹಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದ ಜನತೆಗೆ ಎಸಗಿದ ಅಕ್ಷಮ್ಯ ದ್ರೋಹವಾಗಿದೆ.

ಈ ಬಾರಿಯ ಬಜೆಟ್ ಅನುದಾನದಲ್ಲಿಯೂ ಬಹುಸಂಖ್ಯಾತರನ್ನು ಕಡೆಗಣಿಸಿ ಅಲ್ಪಸಂಖ್ಯಾತರ ಗರಿಷ್ಠ ಓಲೈಕೆಗೆ ಮುಂದಾಗಿರುವ ಜೊತೆಗೆ ರಾಜಕೀಯ ದ್ವೇಷದ ಕಾರಣಕ್ಕಾಗಿ ಕರಾವಳಿ ಜಿಲ್ಲೆಗಳನ್ನು ರಾಜ್ಯ ಕಾಂಗ್ರೆಸ್ ಸರಕಾರ ನಿರ್ಲಕ್ಷ್ಯ ಮಾಡಿದೆ. ಈ ಬಗ್ಗೆ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ ಕಲಿಸಲಿದ್ದಾರೆ. ಜೈನ ಮುನಿ ಮತ್ತು ಹಿಂದೂ ಕಾರ್ಯಕರ್ತನ ಹತ್ಯೆಯ ನಿಷ್ಪಕ್ಷಪಾತ ತನಿಖೆಯ ಬಗ್ಗೆ ರಾಜ್ಯ ಸರಕಾರದ ಮೇಲೆ ಯಾವುದೇ ನಂಬಿಕೆ ಇರದ ಕಾರಣ, ಈ ಎರಡೂ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಶಾಸಕ ಕೆ.ರಘುಪತಿ ಭಟ್, ಬಿಜೆಪಿ ಉಡುಪಿ ನಗರಾಧ್ಯಕ್ಷ ಮಹೇಶ್ ಠಾಕೂರ್, ಜಿಲ್ಲಾ ಉಪಾಧ್ಯಕ್ಷ ರವಿ ಅಮೀನ್, ಶ್ರೀಶ ನಾಯಕ್ ಪೆರ್ಣಂಕಿಲ, ಜಿಲ್ಲಾ ವಕ್ತಾರ ಕೆ.ರಾಘವೇಂದ್ರ ಕಿಣಿ, ಜಿಲ್ಲಾ ಕಾರ್ಯದರ್ಶಿ ರೇಶ್ಮಾ ಉದಯ ಶೆಟ್ಟಿ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಪ್ರಕೋಷ್ಠಗಳ ಸಂಯೋಜಕ ಜಗದೀಶ್ ಆಚಾರ್ಯ ಕಪ್ಪೆಟ್ಟು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಉಡುಪಿ ನಗರಸಭೆ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಶ ಭಟ್ ಕೊಡವೂರು, ಬಿಜೆಪಿ ಉಡುಪಿ ನಗರ ಉಪಾಧ್ಯಕ್ಷರಾದ ವಿಜಯ ಕೊಡವೂರು, ಕೃಷ್ಣಪ್ಪ ಜತ್ತನ್, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಮಣಿಪಾಲ, ದಿನೇಶ್ ಅಮೀನ್, ಕಾರ್ಯದರ್ಶಿ ದಯಾಶಿನಿ, ಲಕ್ಷ್ಮೀ ಶೆಟ್ಟಿ, ಕೋಶಾಧಿಕಾರಿ ಸಂತೋಷ್ ಆಚಾರ್ಯ, ನಗರ ಯುವ ಮೋರ್ಚಾ ಅಧ್ಯಕ್ಷ ರೋಷನ್ ಶೆಟ್ಟಿ, ಉಡುಪಿ ನಗರಸಭೆಯ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ, ನಗರಸಭಾ ಸದಸ್ಯರು, ಮಹಾ ಶಕ್ತಿ ಕೇಂದ್ರಗಳ ಅಧ್ಯಕ್ಷರು, ಪಕ್ಷದ ವಿವಿಧ ಸ್ತರದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.