ಉಡುಪಿ: ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘವು 2025–26ನೇ ಸಾಲಿನ ‘ಎ’ ವರ್ಗದ ಸಹಕಾರಿ ಸಂಘಗಳ ಜಿಲ್ಲಾ ಬ್ಯಾಂಕಿನ ಸಾಧನಾ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯ ಸಂದರ್ಭದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎನ್. ರಮೇಶ್ ಶೆಟ್ಟಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂದೀಪ ಶೆಟ್ಟಿ ಅವರನ್ನು ಸನ್ಮಾನಿಸಿ, ಪ್ರಶಸ್ತಿ ಪತ್ರ ಹಾಗೂ ಗೌರವ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಉಪ್ಪೂರು ಮತ್ತು ಹಾವಂಜೆ ಎಂಬ ಕೇವಲ ಎರಡು ಗ್ರಾಮಗಳನ್ನು ಕಾರ್ಯವ್ಯಾಪ್ತಿಯಾಗಿ ಹೊಂದಿರುವ ಸಂಘವು ವರದಿ ಸಾಲಿನಲ್ಲಿ ₹400 ಕೋಟಿಗೂ ಅಧಿಕ ವ್ಯವಹಾರ ನಡೆಸಿರುವುದು ವಿಶೇಷ ಸಾಧನೆಯಾಗಿದೆ. ಇದೇ ಅವಧಿಯಲ್ಲಿ ₹103 ಕೋಟಿಗೂ ಅಧಿಕ ಠೇವಣಿ ಸಂಗ್ರಹಿಸಿ, ₹74 ಕೋಟಿಗೂ ಅಧಿಕ ಸಾಲ ವಿತರಣೆ ಮಾಡಿದ್ದು, ₹1.12 ಕೋಟಿ ಲಾಭ ಗಳಿಸಿದೆ.
ಸನ್ಮಾನ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಅಶೋಕ ಕುಮಾರ್ ಶೆಟ್ಟಿ ಹಾಗೂ ರಾಜೇಶ್ ರಾವ್ ಪಾಂಗಾಳ, ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ಶ್ರೀಮತಿ ಲಾವಣ್ಯ ಕೆ.ಆರ್., ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಜಯಕರ ಶೆಟ್ಟಿ ಇಂದ್ರಾಳಿ ಹಾಗೂ ವಲಯ ಮೇಲ್ವಿಚಾರಕರಾದ ಕೆ. ರಾಜಾರಾಮ ಶೆಟ್ಟಿ ಉಪಸ್ಥಿತರಿದ್ದರು.















