ಮನೆ ಮನೆಗೆ ಲಸಿಕಾ ಮಿತ್ರ 2.0 ; ಬುಧವಾರದಂದು ಕೋವಿಡ್ ಲಸಿಕಾ ಮೇಳ: ನಾಲ್ಕನೇ ಅಲೆಯನ್ನೆದುರಿಸಲು ಜಿಲ್ಲಾಡಳಿತ ಸಜ್ಜು

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ 4 ನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಲಸಿಕೀಕರಣ ಪ್ರಗತಿಯ ವೇಗವನ್ನು ಹೆಚ್ಚಿಸಬೇಕಾಗಿದ್ದು, ಇದಕ್ಕಾಗಿ ಮನೆ ಮನೆಗೆ ಲಸಿಕಾ ಮಿತ್ರ 2.0 ಲಸಿಕಾಕರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಜೂನ್ ಮತ್ತು ಜುಲೈ ತಿಂಗಳಲ್ಲಿ ಕೋವಿಡ್ ಲಸಿಕೀಕರಣವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಆಶಾ ಕಾರ್ಯಕರ್ತೆಯರು ಮನೆ ಭೇಟಿ ನಡೆಸಿ , 12-14 ವಯಸ್ಸಿನ ಮಕ್ಕಳು, 15-17 ವಯಸ್ಸಿನ ಮಕ್ಕಳು, 18 ವರ್ಷ ಮೇಲ್ಪಟ್ಟ ನಾಗರಿಕರು ಪ್ರಥಮ ಹಾಗೂ ದ್ವಿತೀಯ ಡೋಸ್ ಪಡೆಯಲು ಬಾಕಿ ಇರುವವರು, 60 ವರ್ಷ ಮೇಲ್ಪಟ್ಟವರು, ಆರೋಗ್ಯ ಕಾರ್ಯಕರ್ತರು ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಲು ಬಾಕಿ ಇರುವವರನ್ನು ಗುರುತಿಸಿ, ಅವರ ಮನವೊಲಿಸಿ ಶಾಲೆ ಅಥವಾ ಆಸ್ಪತ್ರೆಯ ಸೆಷನ್‌ನಲ್ಲಿ ಕೋವಿಡ್ ಲಸಿಕೆ ಪಡೆಯಲು ಜಾಗೃತಿ ಮೂಡಿಸಿ ಮನವೊಲಿಸಲಿದ್ದಾರೆ.

ಮುಂಚೂಣಿ ಕಾರ್ಯಕರ್ತರ ಮೂಲಕ , ಮೊದಲನೇ ಡೋಸ್ ಪಡೆಯದ ಹಾಗೂ ಎರಡನೇ ಡೋಸ್ ಪಡೆಯಲು ಬಾಕಿ ಇರುವ 12 ವರ್ಷ ಮೇಲ್ಪಟ್ಟ ಎಲ್ಲಾ ಅರ್ಹ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಪ್ರತಿಯೊಬ್ಬ ಫಲಾನುಭವಿಯನ್ನು ಸಂದರ್ಶಿಸಿ ಕೇಂದ್ರ ಸರ್ಕಾರದಿಂದನೀಡಲಾಗುವ ಮಾರ್ಗಸೂಚಿಯನ್ವಯ ಕೋವಿಡ್ -19 ಲಸಿಕೆ ಪಡೆಯಬೇಕಾದವರ ಪಟ್ಟಿ ಸಿದ್ದಪಡಿಸಿ ಲಸಿಕೆ ಪಡೆಯಬೇಕಾದ ಅವಶ್ಯಕತೆಯ ಕುರಿತು ಜಾಗೃತಿ ಮೂಡಿಸಿ, ಸೂಕ್ತ ಸ್ಥಳದಲ್ಲಿ ಲಸಿಕೀಕರಣವನ್ನು ಏರ್ಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಗ್ರಾಮ ವ್ಯಾಪ್ತಿಯಲ್ಲಿ ಬುಧವಾರ ಲಸಿಕಾ ಮೇಳದ ಕುರಿತು ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ನಗರ ಪ್ರದೇಶಗಳ ವ್ಯಾಪ್ತಿಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರ ಸಹಕಾರ ಪಡೆದು, ಲಸಿಕಾ ಶಿಬಿರದ ಕುರಿತು ಮೈಕ್ ಮೂಲಕ ಪ್ರಚಾರ ನಡೆಸಿ ಲಸಿಕೆ ನೀಡಲಾಗುವುದು. ವೃದ್ದ ಮತ್ತು ಅಶಕ್ತರಿಗಾಗಿ ಮೊಬೈಲ್ ಲಸಿಕಾ ಶಿಬಿರವನ್ನು ಏರ್ಪಡಿಸಲಾಗುವುದು.

ಇದುವರೆಗೆ 18 ವರ್ಷ ಮೇಲ್ಪಟ್ಟವರಿಗೆ ನೀಡುವ ಮೊದಲ ಡೋಸ್ ಲಸಿಕೆಯನ್ನು 10,04,495 ಮಂದಿಗೆ ನೀಡಿ 100.55% ಹಾಗೂ ಎರಡನೇ ಡೋಸ್ ನ್ನು 9.98,354 ಮಂದಿಗೆ ನೀಡಿ 99.94% ಸಾಧನೆ ಮಾಡಲಾಗಿದೆ. 15-18 ರ ವಯೋಮಾನದಲ್ಲಿ 49, 186 ಮಂದಿಗೆ ಪ್ರಥಮ ಡೋಸ್ ನೀಡಿ 91.84% ಹಾಗೂ 47,906 ಮಂದಿಗೆ ಎರಡನೇ ಡೋಸ್ ನೀಡಿ 89.45% ಸಾಧನೆ ಆಗಿದೆ. 12-14 ರ ವಯೋಮಾನದಲ್ಲಿ 33,583 ಮಂದಿಗೆ ಪ್ರಥಮ ಡೋಸ್ ನೀಡಿ 108.56% ಹಾಗೂ 27,113 ಮಂದಿಗೆ ಎರಡನೇ ಡೋಸ್ ನೀಡಿ 87.65% ಸಾಧನೆ ಆಗಿದೆ. 15,750 ಆರೋಗ್ಯ ಕಾರ್ಯಕರ್ತರು, 4316 ಮುಂಚೂಣಿ ಕಾರ್ಯಕರ್ತರು 63044 ಮಂದಿ ಹಿರಿಯ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ಕೋವಿಡ್ 19 ಲಸಿಕೆ ನೀಡಲಾಗಿದೆ.