ಕೊಡವೂರು: ದಿವ್ಯಾಂಗ ರಕ್ಷಣಾ ಸಮಿತಿ, ಉಡುಪಿ ಜಿಲ್ಲೆ ಮತ್ತು ರೋಟರಿ ಕ್ಲಬ್, ಕಲ್ಯಾಣಪುರ ವತಿಯಿಂದ ಕೊಡವೂರು ವಾರ್ಡಿನ ಆಯ್ದ ವಿಕಲಚೇತನರಿಗೆ ಮತ್ತು ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ಕಿಟ್ ವಿತರಣೆ ಕಾರ್ಯಕ್ರಮವು ಏ. 04 ರಂದು ವಿಪ್ರ ಶ್ರೀ ಸಭಾಭವನ ಕೊಡವೂರಿನಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಯೋಜಕ ಕೆ .ವಿಜಯ ಕೊಡವೂರು ಮಾತನಾಡಿ, ಕಳೆದ ಎರಡು ವರ್ಷಗಳಿಂದ ದಿವ್ಯಾಂಗರನ್ನು ಗುರುತಿಸಿ, ಅವರ ಸಮಿತಿಯನ್ನು ರಚನೆ ಮಾಡಿ ಪ್ರತೀ ತಿಂಗಳು ದಾನಿಗಳ ನೆರವಿನಿಂದ ದುಡಿಯಲು ಸಾಧ್ಯವಿಲ್ಲದ ದಿವ್ಯಾಂಗರಿಗೆ ಆಹಾರದ ಕಿಟ್, ಗಾಲಿಕುರ್ಚಿ, ವಾಕರ್, ವಾಟರ್ ಬೆಡ್, ಮಂಚ ಮತ್ತು ಬೆಡ್, ಔಷಧಿಗೆ ಧನ ಸಹಾಯ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದು, ಈ ತಿಂಗಳಿನಲ್ಲಿ ಉಡುಪಿಯ ಪ್ರತಿಷ್ಠಿತ ಸಂಘ ಸಂಸ್ಥೆಗಳಲ್ಲಿ ಒಂದಾದ ರೋಟರಿ ಕ್ಲಬ್ ಕಲ್ಯಾಣಪುರ ಇವರ ಸಹಯೋಗದಲ್ಲಿ ವಿತರಣಾ ಕಾರ್ಯ ನಡೆಯಿತು ಎಂದರು.
ಪ್ರತಿ ಭಾನುವಾರ ದಿವ್ಯಾಂಗರು ಮತ್ತು ಸ್ವಯಂ ಸೇವಕರು ಒಟ್ಟು ಸೇರಿ ಗುಜರಿ ಸಂಗ್ರಹಿಸಿ ಆ ಗುಜರಿಯಿಂದ ಬರುವ ಹಣದಿಂದ ದಿವ್ಯಾಂಗರಿಗೆ ಮತ್ತು ಅಶಕ್ತರಿಗೆ ಧನ ಸಹಾಯ, ಔಷಧಿಗೆ ಧನ ಸಹಾಯ, ಕಿಟ್ ವಿತರಣೆಗಳನ್ನು ಮಾಡುತ್ತ ಬರುತ್ತಿದ್ದು, ದಾನಿಗಳು ಗುಜರಿ ಇದ್ದಲ್ಲಿ ದಿವ್ಯಾಂಗ ರಕ್ಷಣಾ ಸಮಿತಿ ಕೊಡವೂರು ಇವರನ್ನು ಸಂಪರ್ಕಿಸಬೇಕಾಗಿ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಜಿಲ್ಲಾ ಗವರ್ನರ್ ಗೀತಾ, ಸಹಾಯಕ ಗವರ್ನರ್ ಆಲ್ವಿನ್ ಕ್ವಾಡ್ರಸ್, ಕಲ್ಯಾಣಪುರ ರೋಟರಿ ಕ್ಲಬ್ ಅಧ್ಯಕ್ಷ ದಿವಾಕರ್ ಪಿ., ಕಾರ್ಯದರ್ಶಿ ಗಿರೀಶ್ಚಂದ್ರ ಆರ್., ಮುಂದಿನ ಸಾಲಿನ ಅಧ್ಯಕ್ಷ ಬ್ಯಾಪ್ಟಿಸ್ಟ್ ಡಾಯಸ್ ,ಕೊಡವೂರು ವ್ಯವಸಾಯ ಸಹಕಾರಿ ಸೇವಾ ಸಂಘದ ಅಧ್ಯಕ್ಷ ನಾರಾಯಣ ಬಲ್ಲಾಳ್,ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್ ಕೊಪ್ಪಲ್ ತೋಟ ಹಾಗೂ ಮತ್ತಿತರು ಹಾಜರಿದ್ದರು.
ದಿವ್ಯಾಂಗ ರಕ್ಷಣಾ ಸಮಿತಿ ಅಧ್ಯಕ್ಷ ಹರೀಶ್ ಪ್ರಸಾದ್ ನಿರೂಪಿಸಿ, ಅಖಿಲೇಶ್ ವಂದಿಸಿದರು.