ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸೀಲ್ ಡೌನ್ ಪ್ರದೇಶವಾದ ಸುದೆಮುಗೇರು ಮತ್ತು ಮಾವಿನಕೆಟ್ಟೆಯ 130 ಕುಟುಂಬ ಗಳಿಗೆ ₹1.50 ಲಕ್ಷ ವೆಚ್ಚದಲ್ಲಿ
ಅಕ್ಕಿ ಮತ್ತು ದಿನ ಬಳಕೆಯ ವಸ್ತುಗಳ ಆಹಾರ ಕಿಟ್ ಅನ್ನು ವಿತರಣೆ ಮಾಡಲಾಯಿತು.
ಧರ್ಮಸ್ಥಳ ಯೋಜನೆಯ ತಾಲೂಕು ಯೋಜನಾಧಿಕಾರಿ ಜಯಕರ ಶೆಟ್ಟಿ ಕಿಟ್ ಗಳನ್ನು ವಿತರಿಸಿ ಮಾತನಾಡಿ, ಕೊರೊನಾ ಮಹಾಮಾರಿಯಿಂದಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಸಾವಿರಕ್ಕೂ ಮಿಕ್ಕಿ ಪ್ರಕರಣಗಳಿದ್ದು, ಸುದೇಮುಗೇರು ಮತ್ತು ಮಾವಿನಕಟ್ಟೆ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದೆ. ಇದರಿಂದಾಗಿ ಜನರ ಜೀವನ ನಿರ್ವಹಣೆಗೆ ಕಷ್ಟವಾಗಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನೆಯಿಂದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಆಹಾರ ಕಿಟ್ ಗಳನ್ನು ವಿತರಿಸಲಾಗುತ್ತಿದೆ ಎಂದರು.
ಸುದೇಮುಗೇರುನಲ್ಲಿ 93 ಕುಟುಂಬಗಳಿಗೆ ಮತ್ತು ಮಾವಿನಕಟ್ಟೆಯಲ್ಲಿ 36 ಮನೆಗಳಿಗೆ 15 ದಿನಗಳಿಗೆ ಬೇಕಾದ ಅಕ್ಕಿ ಸೇರಿದಂತೆ ದಿನ ಬಳಕೆಯ ವಸ್ತುಗಳನ್ನು ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಯೋಜನೆ ವತಿಯಿಂದ ರಾಜ್ಯ ದಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಯ ಅನುಕೂಲಕ್ಕಾಗಿ 350 ವಾಹನಗಳನ್ನು ನೀಡಲಾಗಿದೆ. ಬೆಳ್ತಂಗಡಿ ತಾಲೂಕಿಗೆ 2 ವಾಹನಗಳನ್ನು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಬೆಳ್ತಂಗಡಿ ನಗರ ಪಂಚಾಯಿತ್ 8ನೇ ವಾರ್ಡ್ ನ ಸದಸ್ಯ ಜಗದೀಶ್ ಡಿ. ಯೋಜನೆ ವತಿಯಿಂದ ಆಹಾರ ಕಿಟ್ ನೀಡಿರುವುದಕ್ಕೆ ಸುದೇಮುಗೇರು ಪ್ರದೇಶದ ಜನರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಸೇವಾ ಪ್ರತಿನಿಧಿ ಉಷಾ ಪ್ರಮೋದ್. ಬಿ., ಒಕ್ಕೂಟದ ಅಧ್ಯಕ್ಷ ಸೀತಾರಾಮ ಆರ್., ಕಾರ್ಯದರ್ಶಿ ಸುಮಂತ್, ವಿಪತ್ತು ನಿರ್ವಹಣಾ ತಂಡದ ಸಂಯೋಜಕ ಜಗನ್ನಾಥ ಮತ್ತು ಹನೀಫ್ ಲಾಯಿಲ ಉಪಸ್ಥಿತರಿದ್ದರು.