ಉಡುಪಿ: ಕೋವಿಡ್ 19 ಸಂಕಷ್ಟದ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲೇ ಪ್ರಪ್ರಥಮವಾಗಿ ಉಡುಪಿ ಜಿಲ್ಲಾಡಳಿತದ ಸಹಯೋಗದೊಂದಿಗೆ ಉಡುಪಿ ತಾಲೂಕಿನ ಯಶೋಧ ಆಟೋ ಚಾಲಕರ ಮತ್ತು ಮಾಲೀಕರ ಸಂಘದ 37 ಆಟೋ ಚಾಲಕರು ಕಳೆದ ಮೂವತ್ತು ದಿನಗಳಿಂದ ರಾತ್ರಿ-ಹಗಲು ಅನಾರೋಗ್ಯ ಪೀಡಿತರಿಗೆ, ಸಂಕಷ್ಟದಲ್ಲಿದ್ದ ಬಡವರಿಗೆ ತುರ್ತು ವೈದ್ಯಕೀಯ ಸೇವೆಯ ಸಂಚಾರಕ್ಕೆ ಉಚಿತ ಆಟೋ ಸೇವೆ ನೀಡಿದ್ದಾರೆ.
ಈ ಆಟೊ ಚಾಲಕರ ಸೇವೆಯನ್ನು ಗುರುತಿಸಿ ಉಡುಪಿ ರಾಘವೇಂದ್ರ ಮಠದವರು ಮಂತ್ರಾಲಯದ ರಾಯರ ಪ್ರಸಾದರೂಪವಾಗಿ 37 ಚಾಲಕರಿಗೂ ತಲಾ 25 ಕೆ.ಜಿ. ಅಕ್ಕಿಯನ್ನು ಹಸ್ತಾಂತರ ಮಾಡಿದ್ದಾರೆ. ಯಶೋಧ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರು ಕೋವಿಡ್ ವಾರಿಯರ್ಸ್ ಆಗಿ ದುಡಿದ 37 ಜನ ಆಟೋ ಚಾಲಕರಿಗೆ ಸಂಘದ ಮೂಲಕ ತಲಾ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಅದಮಾರು ಮಠದ ವತಿಯಿಂದ ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯತೀರ್ಥ ಶ್ರೀಪಾದರು 37 ಜನ ಆಟೋ ಚಾಲಕರಿಗೆ ಶ್ರೀಕೃಷ್ಣನ ಪ್ರಸಾದರೂಪವಾಗಿ ದಿನಸಿ ಕಿಟ್ ಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ, ಜಿಲ್ಲಾ ಉಪಾಧ್ಯಕ್ಷ ಮಹೇಶ್ ಸುವರ್ಣ ಮಲ್ಪೆ, ಮಾಜಿ ನಗರಸಭೆ ಅಧ್ಯಕ್ಷ ಮತ್ತು ಜಿಲ್ಲಾ ಉಪಾಧ್ಯಕ್ಷ ಯುವರಾಜ್ ಪುತ್ತೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪ್ರವೀಣ್ ಕುಂಜಿಬೆಟ್ಟು ಹರೀಶ್ ಅಮೀನ್, ಜಿಲ್ಲಾ ಕೋಶಾಧಿಕಾರಿ ಶ್ರೀನಿವಾಸ ಕಪ್ಪೆಟ್ಟು, ತಾಲೂಕು ಅಧ್ಯಕ್ಷರುಗಳಾದ ಉದಯ್ ಪಂದುಬೆಟ್ಟು ಮತ್ತು ಅಬೂಬಕ್ಕರ್, ಹರೀಶ್ ಕಾಂಚನ್, ಪ್ರವೀಣ್ ಆಚಾರಿ, ಸಂತೋಷ್ ಶೇರಿಗಾರ್, ರವಿ ಶೇರಿಗಾರ್, ಭಾಸ್ಕರ್ ಶೇರಿಗಾರ್, ದಿನೇಶ್ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.