ಜುಲೈ 1ರಿಂದ 10 ಕೆಜಿ ಧಾನ್ಯ ವಿತರಣೆ- ಸಿಎಂ ಸಿದ್ದರಾಮಯ್ಯ,ಅಲ್ಲಿಯವರೆಗೆ ಫಲಾನುಭವಿಗಳ ಖಾತೆಗೆ ಹಣ

ಬೆಂಗಳೂರು : ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಹೆಚ್ಚುವರಿ ಅಕ್ಕಿ ನೀಡಲು ನಾವು ತೀರ್ಮಾನಿಸಿದರೆ ಕೇಂದ್ರ ಸರ್ಕಾರ ಕುತಂತ್ರದಿಂದ ತಪ್ಪಿಸಿದೆ ಕೇಂದ್ರ ಸರ್ಕಾರ ಅಕ್ಕಿ ಕೊಡಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಖರೀದಿಸಲು ಪಾರದರ್ಶಕವಾಗಿ ಟೆಂಡರ್ ಕರೆಯಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಮ್ಮ ಸರ್ಕಾರ ನೀಡಿದ ಅನ್ನಭಾಗ್ಯ ಭರವಸೆಯಂತೆ 10 ಕೆಜಿ ಆಹಾರಧಾನ್ಯವನ್ನು ಜುಲೈ 1ರಿಂದ ನೀಡಬೇಕಾಗಿದೆ. ನಾವು ನಮ್ಮ ನಿಲುವಿನಿಂದ ಹಿಂದೆ ಸರಿಯದೆ ಯೋಜನೆಯನ್ನು ಜುಲೈ 1ರಿಂದಲೇ ಜಾರಿಗೆ ತರಲು ನಿರ್ಧರಿಸಿದ್ದೇವೆ ಎಂದರು.

ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣ : ರಾಜ್ಯ ಸರ್ಕಾರಕ್ಕೆ ಅಕ್ಕಿ ಲಭ್ಯವಾಗುವವರೆಗೆ ಪ್ರತಿ ಕೆಜಿ ಅಕ್ಕಿಗೆ 34 ರೂ. ನಂತೆ 5 ಕೆಜಿ ಅಕ್ಕಿಯ ಮೊತ್ತ ರೂ.170 ಅನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಡಿಬಿಟಿ ಮಾಡಲು ತೀರ್ಮಾನಿಸಲಾಗಿದೆ. ಅನ್ನಭಾಗ್ಯ ಯೋಜನೆಯಡಿ ನೀಡುವ ಹೆಚ್ಚುವರಿ ಅಕ್ಕಿಗೆ ಪ್ರತಿ ಕೆಜಿಗೆ 34 ರೂಪಾಯಿ ನೀಡಲಾಗುವುದು ಎಂದ ಅವರು, ಯೋಜನೆಯಡಿ ನೀಡುವ ಹಣ ಬಿಪಿಎಲ್ ಕಾರ್ಡುದಾರರ ಖಾತೆಗೆ ನೇರವಾಗಿ ಜಮೆಯಾಗಲಿದೆ ಎಂದರು.

ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳಿದರೆ ಭಾರತೀಯ ಆಹಾರ ನಿಗಮದ ಜತೆ ಮಾತನಾಡುತ್ತೇನೆ. ಸಂಬಂಧಪಟ್ಟ ಸಚಿವರ ಜತೆಗೂ ಮಾತನಾಡಿ ಎಂದು ಹೇಳಿದ್ದರು. ಆದರೆ ಆಹಾರ ಸಚಿವ ಪಿಯೂಷ್ ಗೋಯೆಲ್ ಅವರನ್ನು ಮಾತನಾಡಿಸಿದರೆ ಅವರಿಂದ ಪೂರಕ ಪ್ರತಿಕ್ರಿಯೆ ದೊರೆಯಲಿಲ್ಲ ಎಂದರು.

ಮೊದಲು ನಮಗೆ ಅನ್ನಭಾಗ್ಯ ಯೋಜನೆಯಡಿ ಅಕ್ಕಿ ನೀಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಆದರೆ ತದನಂತರ ಇದ್ದಕ್ಕಿದ್ದಂತೆ ತನ್ನ ನಿಲುವು ಬದಲಿಸಿತು. ಈ ಮಧ್ಯೆ ತೆರೆದ ಮಾರುಕಟ್ಟೆಯಲ್ಲಿ ಖಾಸಗಿಯವರಿಗೆ ಟೆಂಡರ್ ಮೂಲಕ ಅಕ್ಕಿ ನೀಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಅದರ ಬಳಿ ಯಥೇಚ್ಚ ಅಕ್ಕಿ ಇದೆ ಎಂಬುದಕ್ಕೆ ಇದು ಸಾಕ್ಷಿ ಎಂದು ಟೀಕಿಸಿದರು.

ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಬದಲು ಹಣ ಒದಗಿಸಿದರೆ ಮಾರುಕಟ್ಟೆಯಲ್ಲಿ ಅಕ್ಕಿಯ ದರ ಹೆಚ್ಚಾಗುತ್ತದೆ ಎಂಬ ವಾದವನ್ನು ನಿರಾಕರಿಸಿದ ಸಿಎಂ, ರಾಜ್ಯಕ್ಕೆ ಅಕ್ಕಿ ದಾಸ್ತಾನು ದೊರೆತ ತಕ್ಷಣದಿಂದ ಹಣದ ಬದಲು ಅಕ್ಕಿಯನ್ನು ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡುದಾರರಿಗೆ ವಿತರಿಸಲಾಗುವುದು.

ರಾಜ್ಯದ ಜನರಿಗೆ ನಮ್ಮ ಸರ್ಕಾರ ನೀಡಿರುವ ಗ್ಯಾರಂಟಿಯಿಂದ ಹಿಂದೆ ಸರಿಯಬಾರದೆಂಬ ಉದ್ದೇಶದಿಂದ ಸಚಿವ ಸಂಪುಟದಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದರು.

ಸಿಎಂ ಕಚೇರಿಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅದು ಅವರ ಕಾಲದಲ್ಲಿ ನಡೆದಿರುವುದನ್ನು ನೆನಪು ಮಾಡಿಕೊಂಡು ಇವಾಗ ಹೇಳುತ್ತಿದ್ದಾರೆ ಎಂದಷ್ಟೇ ಹೇಳಿ ತೆರಳಿದರು.

ಬಡವರಿಗೆ ಅಕ್ಕಿ ಕೊಡುವ ವಿಚಾರದಲ್ಲಿ ರಾಜ್ಯದಲ್ಲಿರುವ ಬಿಜೆಪಿಯವರು ಕೇಂದ್ರದೊಂದಿಗೆ ಮಾತನಾಡಿ ರಾಜ್ಯಕ್ಕೆ ಅಕ್ಕಿ ಕೊಡಿಸಬೇಕಿತ್ತು. ನಾನು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಹಾಗೂ ರಾಜ್ಯ ಆಹಾರ ಸಚಿವರು, ಕೇಂದ್ರ ಸಚಿವರನ್ನು ಭೇಟಿ ಮಾಡಿ, ಅಕ್ಕಿ ಸರಬರಾಜು ಮಾಡಲು ಮನವಿ ಮಾಡಲಾಯಿತು.

ಎನ್ ಸಿ ಸಿಎಫ್, ನಫೆಡ್, ಕೇಂದ್ರೀಯ ಭಂಡಾರ, ಈ ಮೂರು ಸಂಸ್ಥೆಗಳು ಅಕ್ಕಿ ಪೂರೈಸಲು ಸೂಚಿಸಿರುವ ದರ ಹೆಚ್ಚಾಗಿದೆ. ಎನ್ ಸಿ ಸಿ ಎಫ್ ನವರು 32.94 ಪೈಸೆ ಸೂಚಿಸಿದ್ದು, ನಾವು 32.24 ರೂ.ಗಳಿಗೆ ನೀಡಬೇಕೆಂದು ಕೋರಿದ್ದೇವೆ ಎಂದು ತಿಳಿಸಿದರು.

ಜುಲೈ 1ರಿಂದ ಅಕ್ಕಿ ನೀಡಲಾಗುವುದು ಎಂಬ ಭರವಸೆ ನೀಡಲಾಗಿದೆ. ರಾಜ್ಯಕ್ಕೆ ಪ್ರತಿ ತಿಂಗಳು 2,29,000 ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದ್ದು, ಇಷ್ಟು ಪ್ರಮಾಣದ ಅಕ್ಕಿಯನ್ನು ಯಾವ ರಾಜ್ಯದವರೂ ಪೂರೈಸಲು ಸಾಧ್ಯವಿಲ್ಲ. ಯುಪಿಎ ಸರ್ಕಾರ ರಚಿಸಿದ ಆಹಾರ ಭದ್ರತೆ ಕಾಯ್ದೆಯ ಪ್ರಕಾರ ಹಿಂದೆ ನಮ್ಮ ಸರ್ಕಾರ ಜನರಿಗೆ 7 ಕೆಜಿವರೆಗೆ ಅಕ್ಕಿ ಪೂರೈಸಿತ್ತು. ಈಗ ಆಂಧ್ರಪ್ರದೇಶ, ತೆಲಂಗಾಣ, ಪಂಜಾಬ್ ರಾಜ್ಯಗಳಲ್ಲಿಯೂ ಅಕ್ಕಿಯ ದರ ಹೆಚ್ಚಾಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ಬಡವರು ಮತ್ತು ಮಧ್ಯಮ ವರ್ಗದವರಿಗೆ ಅಕ್ಕಿ ಕೊಡಲು ಶ್ರಮಿಸುತ್ತಿದ್ದಾಗ ಬಿಜೆಪಿ ಸರ್ಕಾರವನ್ನು ಆಡಿಕೊಂಡಿತ್ತು. ಅಕ್ಕಿ ಕೊಡಲು ಸಾಧ್ಯವಾಗದಿದ್ದರೆ ಅಕ್ಕಿ ಮೊತ್ತದ ಹಣ ಕೊಡಿ ಎನ್ನುವ ಸವಾಲನ್ನು ಸರ್ಕಾರದ ಮುಂದೆ ಇಟ್ಟಿತ್ತು. ಈ ಸವಾಲನ್ನು ಸರಿಗಟ್ಟಿದ ಸರ್ಕಾರ ಅಕ್ಕಿ ಬದಲಿಗೆ ಅಕ್ಕಿ ಮೊತ್ತದ ಹಣವನ್ನು ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಾಕುವ ನಿರ್ಧಾರ ತೆಗೆದುಕೊಂಡು ಬಿಜೆಪಿಯ ಬತ್ತಳಿಕೆಯನ್ನು ಬರಿದು ಮಾಡಿದೆ.