ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ ಸೇವೆ ಮತ್ತು ಸಮರ್ಪಣ ಅಭಿಯಾನ: ಕುಯಿಲಾಡಿ ಸುರೇಶ್ ನಾಯಕ್

ಹಿರಿಯಡಕ: ವಿಶ್ವ ನಾಯಕ ಪ್ರಧಾನಿ ನರೇಂದ್ರ ಮೋದಿಯವರ 71ನೇ ಜನ್ಮ ದಿನಾಚರಣೆಯ ಪ್ರಯುಕ್ತ ಪಕ್ಷವು ಹಮ್ಮಿಕೊಂಡಿರುವ ಸೇವೆ ಮತ್ತು ಸಮರ್ಪಣ ಅಭಿಯಾನ ಗರಿಷ್ಠ ಸೇವಾ ಕಾರ್ಯಗಳ ಮೂಲಕ ಜಿಲ್ಲೆಯಾದ್ಯಂತ ಹೊಸ ಸಂಚಲನ ಮೂಡಿಸಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು.

ಅವರು ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆಯ ಅಂಗವಾಗಿ ಸೇವೆ ಮತ್ತು ಸಮರ್ಪಣ ಅಭಿಯಾನದಡಿ ಬಿಜೆಪಿ ಉಡುಪಿ ಜಿಲ್ಲೆ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಉಡುಪಿ ಜಿಲ್ಲೆ, ಅಮೋಘ ಉಡುಪಿ ಹಿರಿಯಡ್ಕ, ವೈದ್ಯಕೀಯ ಪ್ರತಿನಿಧಿಗಳ ಸಂಘ ಉಡುಪಿ ಇವರ ಜಂಟಿ ಸಹಯೋಗದೊಂದಿಗೆ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಇದರ ತಜ್ಞ ವೈದ್ಯರಿಂದ ಭಾನುವಾರ ಹಿರಿಯಡ್ಕ ದೇವಾಡಿಗರ ಸಭಾ ಭವನದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಕೊರೋನಾ ಸಂಕಷ್ಟವನ್ನು ಸಮರ್ಥವಾಗಿ ನಿಭಾಯಿಸಿ ವಿಕಾಸದತ್ತ ದಾಪುಗಾಲು ಹಾಕುತ್ತಿರುವ ಸನ್ನಿವೇಶದಲ್ಲಿ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇದೆ. ಬಿಜೆಪಿ ದೇಶದಾದ್ಯಂತ ಘೋಷಿಸಿರುವ 20 ದಿನಗಳ ಸೇವೆ ಮತ್ತು ಸಮರ್ಪಣ ಅಭಿಯಾನವು ಉಡುಪಿ ಜಿಲ್ಲೆಯಾದ್ಯಂತ 9 ವಿವಿಧ ಸೇವಾ ಕಾರ್ಯಗಳ ಜೊತೆಗೆ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಜನತೆಗೆ ಸಾರ್ಥಕ ಆರೋಗ್ಯ ಸೇವೆ ಒದಗಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರಕ್ರಿಯೆ ಬಿಜೆಪಿ ಕಾರ್ಯಕರ್ತರ ಸಮರ್ಪಣಾಭಾವದ ಸೇವೆಗೆ ಜ್ವಲಂತ ನಿದರ್ಶನ ಎಂದು ಕುಯಿಲಾಡಿ ಹೇಳಿದರು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿ ಆರೋಗ್ಯ ಶಿಬಿರಗಳ ಔಚಿತ್ಯ ಮತ್ತು ಪ್ರಧಾನಿ ಮೋದಿ ಆಡಳಿತ ಆರೋಗ್ಯ ಸೇವೆಗೆ ನೀಡಿದ ಕೊಡುಗೆಗಳನ್ನು ವಿವರಿಸಿದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ಪಾಲ್ ಎ. ಸುವರ್ಣ, ಉಡುಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಂಚಾಲಕ ಡಾ! ರಾಮಚಂದ್ರ ಕಾಮತ್ ರವರು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಜನಪ್ರಿಯ ಯೋಜನೆಗಳನ್ನು ಉಲ್ಲೇಖಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ 71ನೇ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸುವ ಮತ್ತು ಅವರ ನೇತೃತ್ವದಲ್ಲಿ ಜಾರಿಗೆ ಬಂದಿರುವ ಜನಪರ ಯೋಜನೆಗಳನ್ನು ಪ್ರಶಂಸಿಸಿ ಪೋಸ್ಟ್ ಕಾರ್ಡ್ ಬರೆಯುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.

ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಕೆ.ಎಂ.ಸಿ. ಮಾರ್ಕೆಟಿಂಗ್ ವಿಭಾಗದ ಡೆಪ್ಯುಟಿ ಮೆನೇಜರ್ ಮೋಹನ್ ಶೆಟ್ಟಿ, ಬಿಜೆಪಿ ಜಿಲ್ಲಾ ವೈದ್ಯಕೀಯ ಪ್ರಕೋಷ್ಠದ ಸಹ ಸಂಚಾಲಕ ಡಾ! ವಿದ್ಯಾಧರ ಶೆಟ್ಟಿ ಕೆ., ಅಮೋಘ ಉಡುಪಿ ಹಿರಿಯಡ್ಕ ಸಂಚಾಲಕಿ ಪೂರ್ಣಿಮಾ ಸುರೇಶ್ ನಾಯಕ್, ಬಿಜೆಪಿ ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ್ ನಾಯಕ್, ಬಿಜೆಪಿ ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ ಮಾಂಬೆಟ್ಟು, ಗೋಪಾಲಕೃಷ್ಣ ರಾವ್ ಉಪಸ್ಥಿತರಿದ್ದರು.

ಬಿಜೆಪಿ ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಸತ್ಯಾನಂದ ನಾಯಕ್ ಸ್ವಾಗತಿಸಿದರು. ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪೆರ್ಡೂರು ಮಹಾ ಶಕ್ತಿಕೇಂದ್ರದ ಅಧ್ಯಕ್ಷ ಜಿಯಾನಂದ ಹೆಗ್ಡೆ ವಂದಿಸಿದರು.

ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದ 11 ವಿವಿಧ ಸೇವಾ ವಿಭಾಗಗಳಲ್ಲಿ 450ಕ್ಕೂ ಮಿಕ್ಕಿ ಸಾರ್ವಜನಿಕರ ಆರೋಗ್ಯ ತಪಾಸಣೆ ನಡೆಸಲಾಯಿತು. ಲಸಿಕೆ ವಿತರಣಾ ಕೇಂದ್ರದಲ್ಲಿ 98 ಮಂದಿ ಲಸಿಕೆ ಪಡೆದರು. ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದ ಕೌಂಟರ್ ಮೂಲಕ ಅಪೇಕ್ಷಿತರಿಗೆ ಉಚಿತ ಔಷಧಿಯನ್ನು ವಿತರಿಸಲಾಯಿತು.