ನೆರೆ ಸಂತ್ರಸ್ಥರಿಗೆ ತಕ್ಷಣ ರಕ್ಷಣೆ ಒದಗಿಸಿ ಅಗತ್ಯ ನೆರವು ಕಲ್ಪಿಸಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಉಡುಪಿ: ನೆರೆಯಿಂದ ಸಂಕಷ್ಟಕ್ಕೆ ಒಳಗಾದವರಿಗೆ ತಕ್ಷಣದಲ್ಲಿ ರಕ್ಷಣೆ ಕೊಡುವುದರ ಜೊತೆಗೆ ಆಶ್ರಯ ಒದಗಿಸಿ ದೈನಂದಿನ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿದ ನಂತರದಲ್ಲಿ ನೆರವು ಒದಗಿಸಿ ಸಹಜ ಜೀವನ ನಡೆಸಲು ಅನುವು ಮಾಡಿಕೊಡಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ವಿಕಲಚೇತನ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲೆಯಲ್ಲಿ ಅತಿವೃಷ್ಠಿಯಾಗುತ್ತಿದ್ದು ಈ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಕಳೆದ ಎರಡು ಮೂರು ತಿಂಗಳಿನಿಂದ ವಾಡಿಕೆ ಮಳೆಯು ಕುಂಠಿತವಾಗಿ, ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದಿತ್ತು , ಆದರೆ ಕಳೆದ 10 ದಿನಗಳಲ್ಲಿ 650 ಮಿಮಿ ರಷ್ಟು ಮಳೆಯಾಗಿದೆ ಆದರೆ ವಾಡಿಕೆಯಂತೆ 310 ಮಿಮೀ ಮಳೆಯಾಗಬೇಕಿತ್ತು ಆದರೆ 10 ಕ್ಕೂ ಅಧಿಕ ಗ್ರಾಮ ಪಂಚಾಯತ್ ನಲ್ಲಿ ಒಂದೇ ದಿನದಲ್ಲಿ 300 ಮಿಮೀ ಗೂ ಹೆಚ್ಚು ಮಳೆ ಮಳೆಯಾಗಿ ಹೆಚ್ಚಿನ ನೆರೆಗಳು ಉಂಟಾಗಿವೆ. ಮಳೆಯಿಂದ ತೊಂದರೆಗೊಳಗಾದ ನೆರೆ ಸಂತ್ರಸ್ಥರಿಗೆ ತಕ್ಷಣದಲ್ಲಿಯೇ ಪರಿಹಾರ ಕಲ್ಪಿಸಬೇಕು. ಮುಂದಿನ ದಿನಗಳಲ್ಲಿಯೂ ಸಹ ಈ ರೀತಿ
ನೆರೆ ಉಂಟು ಸಾಧ್ಯತೆಗಳಿದ್ದು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದರು. ಹೆಚ್ಚಿನ ಮಳೆಯಿಂದಾಗಿ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಕೃತಕ ನೆರೆಗಳು ನಗರ ಪ್ರದೇಶಗಳಲ್ಲಿ ಆಗುತ್ತಿವೆ. ತೋಡುಗಳಲ್ಲಿ ಸುವ್ಯವಸ್ಥಿತವಾಗಿ ನೀರು ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಪ್ರತಿವರ್ಷವೂ ಕರಾವಳಿ ತೀರದಲ್ಲಿ ಕಡಲ ಕೊರೆತಗಳು ಉಂಟಾಗುತ್ತಿವೆ ಇವುಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ರೀತಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಕೇವಲ ಸಮುದ್ರಕ್ಕೆ ಕಲ್ಲು ಹಾಕಿದಾಕ್ಷಣ ಸಮಸ್ಯೆ ಪರಿಹಾರವಾಗುವುದಿಲ್ಲ, ವ್ಯಯಿಸಿದ ಹಣವೂ ವ್ಯರ್ಥವಾಗುತ್ತದೆ , ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ವೈಜ್ಞಾನಿಕವಾಗಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಈ ಬಗ್ಗೆ ಅಧಿಕಾರಿಗಳು ಹಿತಾಸಕ್ತಿಯನ್ನು ವಹಿಸುವುದರೊಂದಿಗೆ , ಕಡಲ ಕೊರೆತ ತಡೆಗೆ 15 ದಿನಗಳ ಒಳಗಾಗಿ ವಿಸ್ತೃತ ಯೋಜನಾ ವರದಿಯನ್ನು ಸಿದ್ದಪಡಿಸಿ, ಅನುದಾನ ಒದಗಿಸಲು ಸರಕಾರದ ಜೊತೆ ನಿರಂತರ ಸಂಪರ್ಕದೊಂದಿಗೆ ಅನುದಾನ ಕ್ರೂಡೀಕರಿಸಿ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು ಎಂದರು.

ಕರಾವಳಿ ಗ್ರಾಮೀಣ ಭಾಗಗಳಲ್ಲಿ ಕಾಲು ಸಂಕವನ್ನೇ ಆಶ್ರಯಿಸಿ ಸಂಚರಿಸುವವರು ಆಕಸ್ಮಿಕವಾಗಿ ಬಿದ್ದು ಪ್ರಾಣ ಹಾನಿ ಉಂಟಾಗುತ್ತಿದೆ ಇವುಗಳನ್ನು ತಪ್ಪಿಸಲು ಅಗತ್ಯವಿರುವ ಎಲ್ಲಾ ಕಡೆ ಕಾಲು ಸಂಕ ನಿರ್ಮಾಣಕ್ಕೆ , ಜಿಲ್ಲೆಯಾದ್ಯಂತ ಸರ್ವೆ ಕಾರ್ಯಗಳನ್ನು ನಡೆಸುವುದರೊಂದಿಗೆ ಪಂಚಾಯತ್ ರಾಜ್ ಇಲಾಖೆ, ಪಿಡಬ್ಲ್ಯೂಡಿ ಹಾಗೂ ಸಣ್ಣ ನೀರಾವರಿ ಇಲಾಖೆಯವರು ಮುಂದಾಗಬೇಕು ಎಂದು ಸೂಚನೆ ನೀಡಿದರು.

ವಾರಾಹಿ ಯೋಜನೆಯನ್ನು 1979 ರಲ್ಲಿ ಪ್ರಾರಂಭಿಸಲು ಮುಂದಾಗಲಾಗಿತ್ತು, ಆದರೆ ಅದು ಅಧಿಕೃತವಾಗಿ 2005 ನೇ ಸಾಲಿನಿಂದ ಕಾಮಗಾರಿಯನ್ನು ಪ್ರಾರಂಭಿಸಲಾಗಿದೆ. 18 ವರ್ಷ ಕಳೆದರೂ ಸಹ ಅದು ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಾಗಿಲ್ಲ ಈ ಬಾರಿಯ ನಮ್ಮ ಸರ್ಕಾರದಲ್ಲಿ ಪೂರ್ಣಗೊಳಿಸಲು ಅಗತ್ಯ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.

ಮಳೆಗಾಲದಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ರೋಗಗಳ ಹರಡುವಿಕೆ ಹೆಚ್ಚಾಗಿರುತ್ತದೆ ಇವುಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಯಾವುದೇ ರೋಗಗಳು ಹರಡದಂತೆ ಎಚ್ಚರವಹಿಸಬೇಕು ಎಂದರು.

ಹೆದ್ದಾರಿ ಸೇರಿದಂತೆ ಇತರೆ ಭಾಗಗಳಲ್ಲಿರುವ ಅಪಾಯಕಾರಿ ಮರಗಳನ್ನು ಗುರುತಿಸುವುದರೊಂದಿಗೆ ಅವುಗಳ ತೆರವು ಕಾರ್ಯಗಳನ್ನು ಶೀಘ್ರದಲ್ಲಿಯೇ ಕೈಗೊಂಡಾಗ ಮಾತ್ರ ಮುಂದಾಗುವ ಅಪಘಾತಗಳನ್ನು ತಪ್ಪಿಸಲು ಸಾಧ್ಯ. ಈ ಬಗ್ಗೆ ಅರಣ್ಯ ಇಲಾಖೆಯವರು ಇತರೇ ಇಲಾಖೆಯವರ ಸಮನ್ವಯದೊಂದಿಗೆ ತೆರವುಗೊಳಿಸಬೇಕು ಎಂದರು.

ಪ್ರತಿವರ್ಷವೂ ಸರ್ಕಾರ ಅರಣ್ಯ ಇಲಾಖೆ ಸಹಯೋಗದೊಂದಿಗೆ ಗಿಡಮರಗಳನ್ನು ಬೆಳೆಸಲು ಮುಂದಾಗುತ್ತಿದೆ , ಇಂತಹ ಗಿಡಮರಗಳು ಶೇ.100 ರಷ್ಟು ಫಲಪ್ರದವಾಗುವಂತೆ ನೋಡಿಕೊಳ್ಳಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಕಳೆದ ಸಾಲಿನಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆ, ಶಾಲೆಗಳು, ಅಂಗನವಾಡಿ ಸೇರಿದಂತೆ ಸರ್ಕಾರಿ ಕಟ್ಟಡಗಳ ಒಟ್ಟು 622 ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಲು 692.93 ಲಕ್ಷ ಹಣವನ್ನು ಬಿಡುಗಡೆ ಮಾಡಲಾಗಿದ್ದು ಕೆಲವು ಕಾಮಗಾರಿಗಳು ಅಪೂರ್ಣಗೊಂಡಿವೆ ಇವುಗಳನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಬೇಕೆಂದು ಸೂಚನೆ ನೀಡಿದರು.

ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ನನ್ನ ಸಹಕಾರ ಸದಾ ಇರುತ್ತದೆ, ಅಧಿಕಾರಿಗಳು ಆಸಕ್ತಿ ವಹಿಸಿ ಕಾರ್ಯನಿರ್ವಹಿಸಿದಾಗ ಮಾತ್ರ ಜಿಲ್ಲೆಯ ಅಭಿವೃಧ್ದಿ ಸಾಧ್ಯ ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಕಾರ್ಯನಿರ್ವಹಿಸಬೇಕಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರು , ಜಿಲ್ಲೆಯಲ್ಲಿ ಅತಿವೃಷ್ಠಿಯಿಂದಾಗಿರುವ ಅನಾಹುತಗಳು ಮತ್ತು ಅವುಗಳಿಗೆ ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಸವಿವರವಾಗಿ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ ಹಾಕೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.