ಉಡುಪಿ, ಬಂಟಕಲ್: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯವು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ, 10ನೇ ಬೆಟಾಲಿಯನ್ ಹಾಗೂ ಉಡುಪಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಇದರ ಸಹಯೋಗದೊಂದಿಗೆ ವಿಪತ್ತು ನಿರ್ವಹಣೆ – ಎನ್‌ಡಿಆರ್‌ಎಫ್ ಪರಿಚಯ ಹಾಗೂ ಸಮುದಾಯ ಜಾಗೃತಿ ಕಾರ್ಯಕ್ರಮವನ್ನು ದಿನಾಂಕ 13 ಫೆಬ್ರವರಿ 2026 ರಂದು ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಮತ್ತು
ಸಮುದಾಯದವರಲ್ಲಿ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಅಗತ್ಯವಿರುವ ಮುನ್ನೆಚ್ಚರಿಕೆ ಕ್ರಮಗಳು, ತುರ್ತು ಪ್ರಕ್ರಿಯೆ ವಿಧಾನಗಳು ಮತ್ತು ಜೀವ ರಕ್ಷಣೆ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿತ್ತು.

ಸಂಸ್ಥೆಯ ಪ್ರಾಂಶುಪಾಲರಾದ ಡಾ. ನಾಗರಾಜ್ ಭಟ್ ಮಾತನಾಡಿ ಯುವ ಜನರಲ್ಲಿ ಸುರಕ್ಷತೆ ಮತ್ತು ಸಿದ್ಧತೆಯ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶೈಕ್ಷಣಿಕ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತದೆ ಎಂದರು. ಇಂತಹ ತರಬೇತಿ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿ, ವಿಪತ್ತುಗಳ ಸಂದರ್ಭದಲ್ಲಿ ಪರಿಣಾಮಕಾರಿ ಪ್ರತಿಕ್ರಿಯೆ ನೀಡಬಲ್ಲ ಜವಾಬ್ಧಾರಿಯುತ ನಾಗರೀಕರಾಗಿ ರೂಪುಗೊಳ್ಳಬೇಕೆಂದು ಅವರು ಪ್ರೇರೇಪಿಸಿದರು.
ಉಡುಪಿ ಉಪ ಆಯುಕ್ತರ ಕಛೇರಿಯ ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞರಾದ ರವಿ ಅವರು ಮಾತನಾಡಿ ವಿಪತ್ತುಗಳ ಸಂದರ್ಭದಲ್ಲಿ ಸಿದ್ಧತೆ ಮತ್ತು ತುರ್ತು ಕ್ರಮಗಳ ಅಗತ್ಯತೆಯ ಬಗ್ಗೆ ತಿಳಿಸಿದರು. ಉಪನಿರೀಕ್ಷಕರಾದ ಮುನ್ನಿಕೃಷ್ಣನ್ ಹಾಗೂ ಉಪನ್ಯಾಸಕರಾದ ಶ್ರೀ ಯಲ್ಲಪ್ಪ ಅವರು ಕಾರ್ಯಕ್ರಮದಲ್ಲಿ ಹಾಜರಿದ್ದು ತಮ್ಮ ಬೆಂಬಲವನ್ನು ತಿಳಿಸಿದರು.
10ನೇ ಬೆಟಾಲಿಯನ್, ಆರ್‌ಆರ್‌ಸಿ ಬೆಂಗಳೂರು ಘಟಕದ ಕಮಾಂಡರ್ ಅಜಯ್ ಕುಮಾರ್ ಅವರ ನೇತೃತ್ವದಲ್ಲಿ ಎನ್ ಡಿ ಆರ್ ಎಫ್ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆ, ಪ್ರಥಮ ಚಿಕಿತ್ಸೆ ವಿಧಾನಗಳು, ಸ್ಥಳಾಂತರ ತಂತ್ರಗಳು ಹಾಗೂ ಆಧುನಿಕ ವಿಪತ್ತು ಪ್ರತಿಕ್ರಿಯೆಯ ಸಾಧನಗಳ ಕುರಿತು ಪ್ರಾಯೋಗಿಕ ಪ್ರದರ್ಶನ ನೀಡಿದರು.
ಈ ಕಾರ್ಯಕ್ರಮದಿಂದಾಗಿ ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಪ್ರವಾಹ ಅಗ್ನಿ ಅವಗಢ ಹಾಗೂ ಭೂಕಂಪದಂತಹ ತುರ್ತು ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದರ ಬಗ್ಗೆ ಭಾಗವಹಿಸಿದವರಿಗೆ ನೈಜ ಅನುಭವದ ಮೂಲಕ ತಿಳುವಳಿಕೆ ದೊರಕಿತು.
ಈ ಕಾರ್ಯಕ್ರಮವನ್ನು ಐಕ್ಯೂಎಸಿ ಘಟಕದ ಸಂಯೋಜಕರಾದ ಡಾ. ಸುಬ್ಬುಲಕ್ಷ್ಮಿ ಎನ್ ಕಾರಂತ್ ಇವರು ಸಂಯೋಜಿಸಿದರು, ಸಂಸ್ಥೆಯ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ದೀಪಿಕಾ ಬಿ ವಿ ಕಾರ್ಯಕ್ರಮವನ್ನು ನಿರೂಪಿಸಿದರು.
















