ವಿಕ್ರಾಂತ್ ರೋಣಾಗೆ ಶುಭ ಹಾರೈಸಿದ ರಾಜಮೌಳಿ; ಸಿನಿಮಾ ನೋಡಿ ಕಿಚ್ಚನಿಗೆ ಜೈ ಅಂದ ಪ್ರೇಕ್ಷಕರು

ನಿರ್ದೇಶಕ ಎಸ್ಎಸ್ ರಾಜಮೌಳಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರಸಿದ್ಧ ನಿರ್ದೇಶಕರಲ್ಲಿ ಒಬ್ಬರು. ಇವರ ಹೆಸರಿಗೆ ಯಾವುದೇ ಪರಿಚಯದ ಅಗತ್ಯವಿಲ್ಲ. ಅಂತಹ ಒಬ್ಬ ನಿರ್ದೇಶಕನ ಕೈಯಲ್ಲಿ ಹೊಗಳಿಸಿಕೊಳ್ಳುವುದೆಂದರೆ ನಿಜವಾಗಿಯೂ ಖುಷಿಯ ವಿಚಾರ. ಬುಧವಾರ, ವಿಶ್ವ ದರ್ಜೆಯ ನಿರ್ದೇಶಕ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವಿಕ್ರಾಂತ್ ರೋಣ ಚಿತ್ರ ತಂಡ ಮತ್ತು ಕಿಚ್ಚ ಸುದೀಪ್ ಅವರಿಗೆ ಶುಭಾಶಯಗಳನ್ನು ಕಳುಹಿಸಿದ್ದಾರೆ.

ಬುಧವಾರ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಎಸ್‌ಎಸ್ ರಾಜಮೌಳಿಯವರು ವಿಕ್ರಾಂತ್ ರೋಣದ ನಾಯಕ ನಟ ಕಿಚ್ಚ ಸುದೀಪ್ ಅವರನ್ನು ಹೊಗಳಿ ಬರೆದಿದ್ದಾರೆ. “ಸುದೀಪ್ ಯಾವಾಗಲೂ ಪ್ರಯೋಗ ಮತ್ತು ಸವಾಲುಗಳನ್ನು ಎದುರಿಸುವಲ್ಲಿ ಮೊದಲಿಗರು. ಅವರು ವಿಕ್ರಾಂತ್ ರೋಣದಲ್ಲಿ ಏನು ಮಾಡಿದ್ದಾರೆಂದು ನೋಡಲು ಕಾತುರನಾಗಿದ್ದೇನೆ. ದೃಶ್ಯಗಳು ಭವ್ಯವಾಗಿ ಕಾಣುತ್ತವೆ. ನಾಳೆ ಬಿಡುಗಡೆಯಾಗಲಿರುವ ಕಿಚ್ಚ ಸುದೀಪ್ ಚಿತ್ರ ಮತ್ತು ಇಡೀ ತಂಡಕ್ಕೆ ನನ್ನ ಶುಭಾಶಯಗಳು” ಎಂದು ಅವರು ಹೇಳಿದ್ದಾರೆ.

ಇಡೀ ವಿಶ್ವವೇ ರಾಜಮೌಳಿ ಅಭಿಮಾನಿಯಾಗಿದ್ದರೆ, ರಾಜಮೌಳಿ ನಮ್ಮ ಕನ್ನಡಿಗ ಕಿಚ್ಚ ಸುದೀಪ್ ಅವರ ಅಭಿಮಾನಿ. ರಾಜಮೌಳಿ ಮತ್ತು ಸುದೀಪ್ ಸಂಬಂಧ ಇಂದು ನಿನ್ನೆಯದಲ್ಲ. ತೆಲುಗು ಚಲನ ಚಿತ್ರ ‘ಈಗ’ ದಿಂದ ಶುರುವಾದ ಈ ಸಂಬಂಧಕ್ಕೆ ಒಂದು ದಶಕ ಸಂದಿದೆ.

ಈ ಮಧ್ಯೆ ವಿಕ್ರಾಂತ್ ರೋಣ ನೋಡಿದ ಪ್ರೇಕ್ಷಕರು ತುಂಬಾ ಖುಷಿಯಾಗಿದ್ದಾರೆ. ಸುದೀಪ್ ನಟನೆ, ಅನೂಪ್ ನಿರ್ದೇಶನ, ಅಜನೀಶ್ ಸಂಗೀತ, ನಿರೂಪ್ ಮತ್ತು ನೀತಾ ಅಶೋಕ್ ಅಭಿನಯ, ವಿಲಿಯಂ ಡೇವಿಡ್ ಸಿನಿಮಾಟೋಗ್ರಫಿ ಎಲ್ಲಾದಕ್ಕೂ ಪ್ರೇಕ್ಷಕ ಜೈ ಅಂದಿದ್ದಾನೆ. ಕನ್ನಡದ ೩ಡಿ ಸಿನಿಮಾವೊಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗುತ್ತಿದ್ದು, ದೇಶ ಮಾತ್ರವಲ್ಲದೆ ವಿಶ್ವದೆಲ್ಲೆಡೆಯ ಪ್ರೇಕ್ಷಕರನ್ನು ಆಕರ್ಷಿಸುತ್ತಿರುವುದು ಕನ್ನಡಿಗರೆಲ್ಲರಿಗೂ ಹರ್ಷವನ್ನು ತಂದಿದೆ.