ಮಂಗಳೂರು: ಲುಲು ಗ್ರೂಪ್ ನಲ್ಲಿ ಉದ್ಯೋಗ ನೇಮಕಾತಿಗಾಗಿ ಫರ್ನಾಂಡಿಸ್ ಗ್ರೂಪ್ ವತಿಯಿಂದ ನೇರ ಸಂದರ್ಶನ

ಮಂಗಳೂರು: ಏಷ್ಯಾದ ಅತಿ ದೊಡ್ಡ ಹೈಪರ್‌ ಮಾರ್ಕೆಟ್ ಗ್ರೂಪ್ ಆದಂತಹ ಲುಲು ಗ್ರೂಪ್ ನಲ್ಲಿ ಯುವಕರಿಗಾಗಿ ಉದ್ಯೋಗಾವಕಾಶಗಳಿದ್ದು, ಅಭ್ಯರ್ಥಿಗಳ ಆಯ್ಕೆಗಾಗಿ ಮಂಗಳೂರಿನ ಫರ್ನಾಂಡಿಸ್ ಅಸೋಸಿಯೇಟ್ಸ್ ಕಚೇರಿಯಲ್ಲಿ ಜೂನ್ 22 ಮತ್ತು 23 ರಂದು ಬೆಳಿಗ್ಗೆ 9 ರಿಂದ ಸಂಜೆ 6 ರ ನಡುವೆ ನೇರ ಸಂದರ್ಶನಗಳನ್ನು ಏರ್ಪಡಿಸಲಾಗಿದೆ ಎಂದು ಫರ್ನಾಂಡಿಸ್ ಗ್ರೂಪ್ ನ ಅಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್ ಹೇಳಿದರು.

ಅವರು ಮಂಗಳವಾರದಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

ಯುಎಇ, ಕತಾರ್, ಬಹ್ರೇನ್‌, ಮಸ್ಕತ್, ಸೌದಿ ಅರೇಬಿಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಂತಹ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಇದೀಗ ಮಂಗಳೂರಿಗೂ ಪಾದಾರ್ಪಣೆ ಮಾಡುತ್ತಿದ್ದು, ಯುವ, ಚೈತನ್ಯಶೀಲ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲು ಮಂಗಳೂರಿನಲ್ಲಿ ಮೊಟ್ಟಮೊದಲ ನೇರ ಸಂದರ್ಶನ ನೇಮಕಾತಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಮಾರಾಟ, ಕೌಂಟರ್ ಮಾರಾಟ ಮತ್ತು ಕ್ಯಾಷಿಯರ್‌ ವಿಭಾಗಗಳಲ್ಲಿ ಹುದ್ದೆಗಳು ಖಾಲಿ ಇದ್ದು, ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಕೆಲಸ ಮಾಡಿದ ಅನುಭವಿ ವೃತ್ತಿಪರರು ಮತ್ತು ಪೂರ್ವ ಅನುಭವವಿಲ್ಲದವರೂ ಕೂಡಾ ಸಂದರ್ಶನಕ್ಕೆ ಹಾಜರಾಗಬಹುದು. ಈ ಹುದ್ದೆಗಳಿಗೆ ಅಗತ್ಯವಿರುವ ಕನಿಷ್ಠ ವಿದ್ಯಾರ್ಹತೆ ಪಿಯುಸಿ ಮತ್ತು ಅರ್ಜಿದಾರರು 21 ಮತ್ತು 28 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು. ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಮಾತನಾಡಲು ಬಲ್ಲವಾರಾಗಿರಬೇಕು ಎಂದು ಅವರು ಹೇಳಿದರು.

ಹುದ್ದೆಗಳಿಗೆ 1200 ದಿರಹಂ ನಿಂದ 1400 ದಿರಹಂ ವೇತನ ಶ್ರೇಣಿ ಇದ್ದು, ಕಂಪನಿಯು 200 ದಿರಹಂ ವರೆಗಿನ ಆಹಾರ ಭತ್ಯೆಯನ್ನು ನೀಡುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ವಸತಿ, ವೀಸಾ, ಟಿಕೆಟ್ ಮತ್ತು ಸಾರಿಗೆ ವ್ಯವಸ್ಥೆಗಳನ್ನು ಕಂಪನಿಯು ನೋಡಿಕೊಳ್ಳುತ್ತದೆ ಎಂದು ಮಾಹಿತಿ ನೀಡಿದರು.

ಆಸಕ್ತರು ಫರ್ನಾಂಡಿಸ್ ಗ್ರೂಪ್, ಮೆಟ್ರೋ ಪ್ಲಾಜಾ, 3 ನೇ ಮಹಡಿ, ಆಕ್ಸಿಸ್ ಬ್ಯಾಂಕ್ ಮೇಲೆ, ಮೋರ್ ಸೂಪರ್ ಮಾರ್ಕೆಟ್ ಎದುರು ವೆಲೆನ್ಸಿಯಾ, ಮಂಗಳೂರು ಇಲ್ಲಿಗೆ ಭೇಟಿ ನೀಡಬಹುದು ಅಥವಾ www.fernandesgroup.com ಅಥವಾ 91 9686675463 / 9819044376 ಕರೆ ಮಾಡುವಂತೆ ತಿಳಿಸಿದರು.

ಸಂಸ್ಥೆಯ ನಿರ್ದೇಶಕಿ ಲೀನಾ ಫೆರ್ನಾಂಡಿಸ್, ಕಾರ್ಯಾಚರಣೆ ನಿರ್ದೇಶಕ ಥಾಮಸ್ ಆಳ್ವ ಉಪಸ್ಥಿತರಿದ್ದರು.