ಕುಂದಾಪುರ: ಬಿಜೆಪಿ ಸಂಸದರಿಗೆ ಕೇವಲ ಅಧಿಕಾರ ಹಿಡಿಯೋದೆ ಗುರಿಯಾಗಿತ್ತೆ ಹೊರತು ರಾಜ್ಯದ ಪರ ಅವರು ಒಂದು ದಿನವೂ ಕೆಲಸ ಮಾಡಿಲ್ಲ. ಗೋ ಬ್ಯಾಕ್ ಶೋಭಾ ಅಭಿಯಾನ ಅಲ್ಲ. ಬದಲಾಗಿ ಗೋ ಬ್ಯಾಕ್ ಆಲ್ ಬಿಜೆಪಿ ಎಂಪೀಸ್ ಅಭಿಯಾನ ಆರಂಭವಾಗಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡು ರಾವ್ ಲೇವಡಿ ಮಾಡಿದರು.
ಭಾನುವಾರ ಹೆಮ್ಮಾಡಿ ಸಮೀಪದ ಬಗ್ವಾಡಿಯಲ್ಲಿ ಪಕ್ಷದ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಬಿಜೆಪಿಯ ಎಲ್ಲಾ ಸಂಸದರು ಕರ್ನಾಟಕದ ಪರವಾಗಿ ಏನೂ ಕೆಲಸ ಮಾಡಿಲ್ಲ. ಯಡಿಯೂರಪ್ಪ, ಅನಂತಕುಮಾರ್ ಹೆಗ್ಡೆ, ಶೋಭಾ ಕರಂದ್ಲಾಜೆ ಸೇರಿದಂತೆ ಯಾರೂ ಕೂಡ ರಾಜ್ಯಕ್ಕೆ ಕೊಡುಗೆ ಕೊಟ್ಟಿಲ್ಲ. ಕರ್ನಾಟಕದ ಸಮಸ್ಯೆಗಳ ಕುರಿತು ಪಾರ್ಲಿಮೆಂಟ್ನಲ್ಲಿ ಧ್ವನಿ ಎತ್ತಿಲ್ಲ. ಪ್ರಧಾನಿ ಮೋದಿಯವರ ಗಮನ ಸೆಳೆದಿಲ್ಲ. ರಾಜ್ಯಕ್ಕೆ ವಿಶೇಷ ಅನುದಾನ ಕೊಡಿಸುವ ಗೋಜಿಗೂ ಹೋಗಿಲ್ಲ. ಕಳೆದ ಎರಡು ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಬರಗಾಲವಿದ್ದು, ಕೇಂದ್ರದ ನೆರವು ಕೋರಿದಾಗ ಕೇವಲ ೮೦೦ ಕೋ.ರೂ. ನೀಡಿದ್ದಾರೆ. ಆದರೆ ಮಹಾರಾಷ್ಟ್ರಕ್ಕೆ ೪,೦೦೦ ಕೋ.ರೂ ನೆರವನ್ನು ಕೊಟ್ಟಿದ್ದಾರೆ. ಈ ತಾತಮ್ಯದ ಬಗ್ಗೆ ಬಿಜೆಪಿ ಸಂಸದರು ತುಟಿಬಿಚ್ಚಿಲ್ಲ ಎಂದು ಬಿಜೆಪಿ ಸಂಸದರ ವಿರುದ್ದ ಹರಿಹಾಯ್ದರು.
ಲೋಕಸಭಾ ಚುನಾವಣಾ ಟಿಕೆಟ್ ಹಂಚಿಕೆಯ ವಿಚಾರದಲ್ಲಿ ಸೋಮವಾರ ಪ್ರಥಮ ಸುತ್ತಿನ ಮಾತುಕತೆ ನಡೆಸಲಿದ್ದೇವೆ. ಎರಡೂ ಪಕ್ಷಗಳ ಮುಖಂಡರು ಕೂತು ಎರಡು ದಿನಗಳ ಕಾಲ ಸುದೀರ್ಘ ಚರ್ಚೆ ನಡೆಸಿ ತೀರ್ಮಾನಕ್ಕೆ ಬರುತ್ತೇವೆ. ಕಳೆದ ಬಾರಿ ಮೂರು ಲೋಕಸಭಾ ಉಪಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಪ್ರಾಭಲ್ಯ ಇದ್ದರೂ ಮಧುಬಂಗಾರಪ್ಪ ಒಳ್ಳೆಯ ಅಭ್ಯರ್ಥಿಯೆಂದು ನಾವು ಜೆಡಿಎಸ್ಗೆ ಬಿಟ್ಟುಕೊಟ್ಟಿದ್ದೇವೆ. ಅದೇ ರೀತಿ ಈ ಭಾರಿಯೂ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದರು.
ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆಯವರ ಘರ್ವಾಪ್ಸಿಯ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯಕ್ಕೆ ಆ ವಿಚಾರದ ಬಗ್ಗೆ ಮಾತನಾಡಲ್ಲ. ಅವರು ಈ ಬಗ್ಗೆ ನಮ್ಮಲ್ಲಿ ಇದುವರೆಗೂ ಮಾತನಾಡಿಲ್ಲ. ಮುಂದೆ ನೋಡಿದರಾಯ್ತು. ಇನ್ನೂ ಉಡುಪಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಯಾವ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಂದು ನಮ್ಮೊಳಗೆ ಚರ್ಚೆ ನಡೆದಿಲ್ಲ. ಆ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದರು.