ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯ ವಾತಾವರಣ: ಕುಂದಾಪುರದಲ್ಲಿ ದಿನೇಶ್ ಅಮೀನ್ ಮಟ್ಟು ಆರೋಪ

ಕುಂದಾಪುರ: ಈ ದೇಶದಲ್ಲಿ ಇಂದು ತುರ್ತು ಪರಿಸ್ಥಿತಿ ಘೋಷಣೆಯಾಗಿಲ್ಲ. ಆದರೆ ಅಘೋಷಿತ ತುರ್ತು ಪರಿಸ್ಥಿತಿಯ ವಾತಾರವಣ ಇದೆ. ಇದನ್ನು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಯಾರ್‍ಯಾರನ್ನು ಯಾವ್ಯಾವ ರೀತಿಯಲ್ಲಿ ಹಣಿಯಬೇಕು ಆ ಕೆಲಸ ನಿರಂತರವಾಗಿ ಆಗುತ್ತಿದೆ. ಯಾವ ಪ್ರಭುತ್ವವೂ ಕೂಡ ಸ್ವತಂತ್ರ ಮಾಧ್ಯಮವನ್ನು ಇಷ್ಟಪಡುವುದಿಲ್ಲ. ಹಿಂದೆ ಇಂದಿರಾ ಗಾಂಧಿಯವರು ತುರ್ತು ಪರಿಸ್ಥಿತಿ ಹೇರಿದ್ದಾಗ ಮಾಧ್ಯಮದವರು ಸೇರಿ ದೇಶಾದ್ಯಂತ ಪ್ರಬಲ ವಿರೋಧಗಳು ವ್ಯಕ್ತವಾಗಿದ್ದವು. ಆದರೆ ಇಂದು ಈಗಿರುವ ಪರಿಸ್ಥಿತಿಯನ್ನು ಮಾಧ್ಯಮಗಳು ಸೇರಿ ಯಾರೂ ಕೂಡ ಪ್ರಶ್ನೆ ಮಾಡದಿರುವಂತಹ ಸ್ಥಿತಿ ನಿರ್ಮಾಣವಾಗಿರುವುದು ಯಾಕೆ ಎನ್ನುವ ಜಿಜ್ಙಾಸೆಗಳು ನನ್ನನ್ನು ಕಾಡುತ್ತಿದೆ ಎಂದು  ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ದಿನೇಶ್ ಅಮೀನ್ ಮಟ್ಟು ಬೇಸರ ವ್ಯಕ್ತಪಡಿಸಿದರು.

ಅವರು ಮಂಗಳವಾರ ಸಂಜೆ ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ ಕವಲು ದಾರಿಯಲ್ಲಿ ಪತ್ರಕರ್ತ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ನಾನು ಪತ್ರಕರ್ತನಾಗಿದ್ದಾಗ ಯಾಕ್ಟಿವಿಸ್ಟ್ ಆಗಿರಲಿಲ್ಲ. ಹೊರಗೆ ಬಂದ ಬಳಿಕ ನನಗೆ ಯಾಕ್ಟಿವಿಸಮ್‌ನ ಆರೋಪಗಳು ಬಂದವು. ವೃತ್ತಿಯ ಪ್ರಾರಂಭದ ಹಂತದಲ್ಲೇ ಯಾಕ್ಟಿವಿಸ್ಟ್ ಆದರೆ ಜರ್ನಲಿಸ್ಟ್ ಆಗಲು ಸಾಧ್ಯವಿಲ್ಲ. ವಿವೇಕಾನಂದರ ಅಂಕಣ ಬರೆದ ಮೇಲೆ ಹಲವರು ನನ್ನನ್ನು ಟೀಕಿಸಿ ಟ್ರೋಲ್ ಮಾಡಿದ್ದರು. ಅದರ ನಂತರ ನಾನು ಯೋಚನೆ ಮಾಡಿದೆ. ಇವೆಲ್ಲವನ್ನೂ ಮೀರಿ ನಾನು ಹೊರಗಡೆ ಹೋದರೆ ಮಾತ್ರ ಇವೆಲ್ಲರನ್ನು ಎದುರಿಸಲು ಸಾಧ್ಯ ಎಂದು ಅರಿತೆ. ಪ್ರಭುತ್ವ ಕ್ರೂರವಾದಾಗ ಲೇಖನಿ ಮುಂಡಾಗುತ್ತದೆ. ಸಾಮ ದಾನ ಭೇದ ದಂಡದ ಮೂಲಕ ಇಡೀ ಮಾಧ್ಯಮವನ್ನು ಹಣಿಯುವ ಪ್ರಯತ್ನ ನಡೆಯುತ್ತಿರುವುದು ವಾಸ್ತವ ಎಂದವರು ಹೇಳಿದ್ದಾರೆ.

ಜಾಗೃತ ಸಮಾಜದಲ್ಲಿ ಮಾತ್ರ ಒಂದು ಪತ್ರಿಕೆ ಯಶಸ್ವಿಯಾಗಿ ಕೆಲಸ ಮಾಡಲು ಸಾಧ್ಯವಿದೆ. ವಿಶ್ವಾಸಾರ್ಹತೆ ಕಳೆದುಕೊಂಡರೆ ಪತ್ರಿಕೆ ರದ್ದಿಯಾಗಿ ಬಿಡುತ್ತದೆ. ಓದುಗ ಪತ್ರ್ರಿಕೆಗಳನ್ನು ಓದುತ್ತಾನೆ, ಆದರೆ ಆತ ಪತ್ರಿಕೆಗಳನ್ನು ನಂಬುತ್ತಿಲ್ಲ. ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲಿ ಪತ್ರಿಕೆಗಳಿಗೆ ಹತ್ತರಿಂದ ಹದಿನೈದು ರೂಪಾಯಿ ಇದೆ. ಆದರೆ ಭಾರತದಲ್ಲಿ ಪತ್ರಿಕೆಗಳು ಮೂರು, ನಾಲ್ಕು ರೂಪಾಯಿಗಳಿಗೆ ಕಡಲೆಪುರಿಯಂತೆ ಮಾರಾಟವಾಗುತ್ತಿದೆ. ಕಡಿಮೆ ದರದ ಪತ್ರಿಕೆಗಳ ಹಿಂದೆ ಓಡುವವವರು ಪತ್ರಿಕೆಗಳು ಸರಿಯಿಲ್ಲ ಎನ್ನುತ್ತಾರೆ. ಓದುಗರೆ ಪತ್ರಿಕೆಯನ್ನು ಜಾಹೀರಾರುದಾರನ ಪಾದದಡಿ ಕೊಂಡುಹೋಗಿ ನಿಲ್ಲಿಸುತ್ತಿದ್ದಾರೆ ಎಂದರು.

 

ಸನ್ಮಾನ:

ನೂತನ ಪದಾಧಿಕಾರಿಗಳಿಗೆ ಪ್ರತಿಜ್ಙಾವಿಧಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಬೋಧಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಛಾಯಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ಕಾರ್ಯನಿತರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಕೆಸಿ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ್ ಎಸ್ ಮರವಂತೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ಸತೀಶ್ ಆಚಾರ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಾಮಕೃಷ್ಣ ಹೇರ್ಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಧನ್ಯವಾದವಿತ್ತರು. ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.