ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ, ಗ್ರಾಹಕ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಜವಳಿ ಸಚಿವ ಪಿಯೂಷ್ ಗೋಯಲ್ ಅವರು ‘ಒಂದು ಜಿಲ್ಲೆ ಒಂದು ಉತ್ಪನ್ನ’ ಉಡುಗೊರೆ ಕ್ಯಾಟಲಾಗ್‌ನ ಡಿಜಿಟಲ್ ಆವೃತ್ತಿಯನ್ನು ಅನಾವರಣಗೊಳಿಸಿದರು. 5 ಆಗಸ್ಟ್ 2022 ರಂದು ವಾಣಿಜ್ಯ ಭವನದಲ್ಲಿ ರಫ್ತು ಉತ್ತೇಜನಾ ಮಂಡಳಿಗಳು ಮತ್ತು ಉದ್ಯಮ ಸಂಘಗಳೊಂದಿಗಿನ ಸಭೆಯಲ್ಲಿ ಡಿಜಿಟಲ್ ಆವೃತ್ತಿ ಬಿಡುಗಡೆ ಗೊಳಿಸಲಾಯಿತು.
ಉಡುಗೊರೆ ಕ್ಯಾಟಲಾಗ್ ಸುಗಂಧ ದ್ರವ್ಯಗಳು ಮತ್ತು ತೈಲಗಳು, ಭಾರತೀಯ ಸ್ಪಿರಿಟ್ ಗಳು, ಗೃಹಾಲಂಕಾರ ಉತ್ಪನ್ನಗಳು, ಬಟ್ಟೆಗಳು ಮತ್ತು ರೇಷ್ಮೆ ಮತ್ತು ಶಾಲುಗಳಂತಹ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಒಳಗೊಂಡಿದೆ. ಒಡಿಒಪಿ ಉಡುಗೊರೆ ಕ್ಯಾಟಲಾಗ್ ಭಾರತದ ಎಲ್ಲಾ ಜಿಲ್ಲೆಗಳ ಸಾಮರ್ಥ್ಯವನ್ನು ಅರಿತುಕೊಳ್ಳುವ ಒಂದು ಹೆಜ್ಜೆಯಾಗಿದೆ ಮತ್ತು ದೇಶದ ವೈವಿಧ್ಯಮಯ ಸ್ಥಳೀಯ ಉತ್ಪನ್ನಗಳಿಗೆ ಜಾಗತಿಕ ಮನ್ನಣೆಯನ್ನು ನೀಡುತ್ತದೆ.
ವಿನ್ಯಾಸಗಳು ಮತ್ತು ಬ್ರ್ಯಾಂಡಿಂಗ್ ನ ಪ್ರೋತ್ಸಾಹಕ್ಕಾಗಿ ಕ್ಯಾಟಲಾಗ್‌ನಿಂದ ಉತ್ಪನ್ನಗಳನ್ನು ಬಳಸಿಕೊಳ್ಳುವಂತೆ ಸಚಿವರು ಎಲ್ಲಾ ಸಚಿವಾಲಯಗಳು, ಕೈಗಾರಿಕಾ ಸಂಘ ಮತ್ತು ರಫ್ತು ಉತ್ತೇಜನಾ ಮಂಡಳಿಗಳನ್ನು ಒತ್ತಾಯಿಸಿದರು. ಕಾರ್ಪೊರೇಟ್ ಕೊಡುಗೆಗಾಗಿ ಭಾರತದ ಈ ಸಂಪತ್ತನ್ನು ಸೇರಿಸಲು ಪ್ರಜ್ಞಾಪೂರ್ವಕ ಪ್ರಯತ್ನವನ್ನು ತೆಗೆದುಕೊಳ್ಳಬೇಕೆಂದು ಅವರು ಶಿಫಾರಸು ಮಾಡಿದರು.
ಇದು ಸ್ಥಳೀಯ ಆರ್ಥಿಕತೆಗೆ ಮಹತ್ತರವಾದ ಉತ್ತೇಜನವನ್ನು ನೀಡುತ್ತದೆ ಮತ್ತು ಅನೇಕ ರೈತರು ಮತ್ತು ಕುಶಲಕರ್ಮಿಗಳ ಜೀವನೋಪಾಯ ಮತ್ತು ಪೋಷಣೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.