ನಿಟ್ಟೆ: ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್ ನಲ್ಲಿ ಸ್ಥಾಪಿತವಾಗಿರುವ ಬೆಂಗಳೂರಿನ ಡಿಲೈತ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ‘ಇಂಟರ್ನೆಟ್ ಆಫ್ ಥಿಂಗ್ಸ್’ ಮೇಲಿನ ಒಂದು ಡಿಜಿಟಲ್ ಉತ್ಪನ್ನ ‘ಐ ಓ ಕ್ಯೂಬ್’ ನ್ನು ಜೂ.9 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು.
ನಿಟ್ಟೆ ಅಟಲ್ ಇನ್ಕ್ಯುಬೇಷನ್ ಸೆಂಟರನ ಸಿಇಓ ಡಾ. ಅನಂತ ಪದ್ಮನಾಭ್ ಆಚಾರ್, ನಿಟ್ಟೆ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಶೆಟ್ಟಿ, ಇನ್ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಕಾರ್ತಿಕ್ ಪೈ ಉತ್ಪನ್ನ ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಡಾ.ಆಚಾರ್, ಮುಂಬರುವ ಪೀಳಿಗೆ ತಂತ್ರಜ್ಞಾನದ ಮುಖಾಂತರ ನೂತನ ಆವಿಷ್ಕಾರಗಳನ್ನು ಮಾಡುವ ಮೂಲಕ ಬಗೆ ಬಗೆಯ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಈ ನಿಟ್ಟಿನಲ್ಲಿ ಅಟಲ್ ಇನ್ಕ್ಯುಬೇಷನ್ ಸೆಂಟರ್ನಲ್ಲಿರುವ ಎಲ್ಲ ರೀತಿಯ ಸವಲತ್ತುಗಳನ್ನು ವಿದ್ಯಾರ್ಥಿಗಳು ಮತ್ತು ಸ್ಟಾರ್ಟ್ ಅಪ್ ಕಂಪನಿಗಳು ಉಪಯೋಗಿಸಿಕೊಳ್ಳಬೇಕು ಎಂದರು.
ಡಾ. ಜ್ಯೋತಿ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ತಂತ್ರಜ್ಞಾನಗಳನ್ನು ಕಲಿಯಲು ಇದೊಂದು ಒಳ್ಳೆಯ ವೇದಿಕೆಯಾಗಿದ್ದು, ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬೇಕೆಂದರು.
ಡಿಲೈತ್ ಕಂಪೆನಿಯ ವ್ಯವಸ್ಥಾಪಕ ಅರುಣ್ ರಾಜಪುರೋಹಿತ್ ಕಂಪೆನಿ ಮತ್ತು ಐ ಓ ಕ್ಯೂಬ್ ಉತ್ಪನ್ನದ ಮಾರ್ಗಸೂಚಿಯ ಬಗ್ಗೆ ತಿಳಿಸಿದರು. ಉತ್ಪನ್ನದ ತಾಂತ್ರಿಕ ಮಾಹಿತಿಗಳನ್ನು ವಿಜಯ್ ನೀಡಿದರು. ಕಂಪೆನಿಯ ವ್ಯವಸ್ಥಾಪಕರಾದ ಶ್ರೀಧರ ಮೂರ್ತಿ ವಂದಿಸಿದರು.
ಡಿಲೈತ್ ಕಂಪನಿಯು ದೇಶದ ವಿವಿಧೆಡೆ ಇಂಟರ್ನೆಟ್ ಅಫ್ ಥಿಂಗ್ಸ್, ಸೈಬರ್ ಸೆಕ್ಯುರಿಟಿ, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ನಿತರ ಕೌಶಲ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ನಿಟ್ಟೆ ತಾಂತ್ರಿಕ ವಿದ್ಯಾಲಯ, ಮಣಿಪಾಲ ಪೋಸ್ಟ್ ಗ್ರಾಜುಯೇಷನ್ ವಿದ್ಯಾಲಯ, ಮಂಗಳೂರು ಯೂನಿವರ್ಸಿಟಿ, ಎಸ್.ಡಿ.ಎಂ ತಾಂತ್ರಿಕ ವಿದ್ಯಾಲಯ, ಮೈಟ್ ಇಂಜಿನಿಯರಿಂಗ್ ಕಾಲೇಜು ಮತ್ತಿತರ ಶೈಕ್ಷಣಿಕ ಮತ್ತು ಐಟಿ ಕಂಪನಿಗಳಿಗೆ ಉತ್ತಮ ಸೇವೆಯನ್ನು ಒದಗಿಸುತ್ತಿದೆ.












