ವ್ಯಕ್ತಿಯಲ್ಲಿ ಉಸಿರಾಟದ ವಾಯು ಮಾರ್ಗಗಳು ಉರಿಯೂತಕ್ಕೊಳಗಾವುದು, ಕಿರಿದಾಗುವುದು ಮತ್ತು ಊದಿಕೊಳ್ಳುವುದು ಮತ್ತು ಹೆಚ್ಚುವರಿ ಲೋಳೆಯ ಉತ್ಪತ್ತಿಯಾಗುವ ಸ್ಥಿತಿಯನ್ನು ಆಸ್ತಮಾ ಎನ್ನುತ್ತಾರೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಆಸ್ತಮಾ ಅಲ್ಪ ಪ್ರಮಾಣದ್ದಾಗಿರಬಹುದು ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವಂತಹುದ್ದಾಗಿರಬಹುದು. ಕೆಲವೊಮ್ಮೆ ಇದು ಮಾರಣಾಂತಿಕ ಆಸ್ತಮಾ ದಾಳಿಗೆ ಕಾರಣವಾಗಬಹುದು.
ಆಸ್ತಮಾ ಸಮಸ್ಯೆಯು ಉಸಿರಾಟದ ತೊಂದರೆ, ಎದೆ ನೋವು, ಕೆಮ್ಮು ಮತ್ತು ಉಬ್ಬಸವನ್ನು ಉಂಟುಮಾಡಬಹುದು. ರೋಗಲಕ್ಷಣಗಳು ಕೆಲವೊಮ್ಮೆ ಉಲ್ಬಣಗೊಳ್ಳಬಹುದು. ಆಹಾರ ಪದ್ಧತಿಯು ರೋಗಿಗಳಲ್ಲಿ ಆಸ್ತಮಾ ಪರಿಸ್ಥಿತಿಯನ್ನು ಹೆಚ್ಚಿಸಬಹುದು ಅಥವಾ ಸ್ವಲ್ಪ ಪರಿಹಾರ ಉಂಟುಮಾಡಬಹುದು ಎಂದು ಸಂಶೋಧನೆಗಳು ಸೂಚಿಸುತ್ತವೆ. ಆದರೂ, ಈ ಉಸಿರಾಟದ ಪರಿಸ್ಥಿತಿಯನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ಆಹಾರ ಕ್ರಮ ಇರುವುದಿಲ್ಲ. ವಿವಿಧ ಕಾರಣಗಳಿಂದಾಗಿ ಆಸ್ತಮಾ ಇರುವವರಿಗೆ ಕೆಲವು ಆಹಾರಗಳು ಇತರರಿಗಿಂತ ಹೆಚ್ಚು ಸೂಕ್ತವಾಗಿರಬಹುದು. ಉದಾಹರಣೆಗೆ ತಾಜಾ ಹಣ್ಣುಗಳು ಮತ್ತು ತರಕಾರಿಗಳು ಪೋಷಕಾಂಶಗಳು ಮತ್ತು ಆ್ಯಂಟಿ ಆಕ್ಸಿಡೆಂಟ್(ಉತ್ಕರ್ಷಣ ನಿರೋಧಕ)ಗಳು.
ಸೇಬು, ಕಿತ್ತಳೆ, ಬಾಳೆಹಣ್ಣು, ಎಪ್ರಿಕಾಟ್, ಪೀಚ್, ಮಾವಿನಹಣ್ಣು, ಕ್ಯಾರೆಟ್, ಬ್ರೊಕೊಲಿ, ಕುಂಬಳಕಾಯಿ, ಪಾಲಕ್ ಮುಂತಾದ ಹಣ್ಣುಗಳು ಮತ್ತು ತರಕಾರಿಗಳು ಆಸ್ತಮಾವನ್ನು ನಿರ್ವಹಿಸಲು ಒಳ್ಳೆಯದಾಗಿರುತ್ತವೆ. ಕೊಬ್ಬಿನ ಮೀನುಗಳಾದ ಸಾಲ್ಮನ್, ಟ್ಯೂನ, ಮತ್ತು ಮ್ಯಾಕೆರೆಲ್, ಅಣಬೆ, ಮೊಟ್ಟೆಯ ಹಳದಿ, ಚೀಸ್, ಯಕೃತ್ತು ಇತ್ಯಾದಿಗಳಲ್ಲಿ ವಿಟಮಿನ್ ಡಿ ಸಮೃದ್ಧವಾಗಿದೆ ಮತ್ತು ಆಸ್ತಮಾ ರೋಗಿಗಳಿಗೆ ಒಳ್ಳೆಯದಾಗಿರುತ್ತವೆ. ಹುರುಳಿ ಕಾಳು, ಕಂದು ಕಡಲೆ, ಹಸಿರು ಮತ್ತು ಹಳದಿ ಹೆಸರು ಬೇಳೆ, ಮತ್ತು ಕಪ್ಪು ಸೋಯಾಬೀನ್ ಮುಂತಾದವು ಶ್ವಾಸಕೋಶಕ್ಕೆ ಉತ್ತಮವಾದ ಕೆಲವು ಬೇಳೆ ಕಾಳುಗಳಾಗಿವೆ. ಇವು ಜೀರ್ಣಕ್ರಿಯೆ, ಮೂತ್ರಪಿಂಡಗಳು ಮತ್ತು ಮೂತ್ರಜನಕಾಂಗದ ಗ್ರಂಥಿಗಳನ್ನು ಬಲಪಡಿಸುತ್ತವೆ. ಇವು ದೇಹದ ಇತರ ಅಂಗಗಳನ್ನೂ ಬಲಪಡಿಸುತ್ತವೆ.
ಶ್ವಾಸಕೋಶದ ಕಾರ್ಯನಿರ್ವಹಣೆಯು ದೊಡ್ಡ ಕರುಳಿನೊಂದಿಗೆ ನಿಕಟ ಸಂಪರ್ಕ ಹೊಂದಿರುವುದರಿಂದ, ಕಾಳುಗಳನ್ನು ಚೆನ್ನಾಗಿ ಬೇಯಿಸುವ ಮೂಲಕ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಬೆಂಬಲಿಸುವುದು ಮುಖ್ಯವಾಗಿದೆ. ಗಾಢ ಬಣ್ಣದಲ್ಲಿರುವ ಯಾವುದೇ ಕಾಳುಗಳು ಬಹಳಷ್ಟು ಖನಿಜಗಳನ್ನು ಹೊಂದಿರುತ್ತವೆ ಮತ್ತು ವಾಯು ಅಥವಾ ಅಜೀರ್ಣದ ಅಸ್ವಸ್ಥತೆಯನ್ನು ಉಂಟುಮಾಡುವುದಿಲ್ಲ. ಆಸ್ತಮಾ ಗುಣಪಡಿಸುವಂತಹ ಆಹಾರದಲ್ಲಿ ಅವುಗಳನ್ನು ಸೇರಿಸುವುದು ಸುರಕ್ಷಿತವಾಗಿದೆ. ತೊಗರಿ ಬೇಳೆ, ಮಡಿಕೆ ಕಾಳು ಮತ್ತು ಕಡಲೇಬೇಳೆ ಕೂಡ ಪ್ರಯೋಜನಕಾರಿಯಾಗಿವೆ.
ಅದಾಗ್ಯೂ, ಬಿಳಿ ಅಕ್ಕಿ ಅಥವಾ ಸಂಸ್ಕರಿಸಿದ ಬೇಳೆ ಅಥವಾ ಸರಳವಾದ ಆಹಾರವನ್ನು ಮಾತ್ರ ತಿನ್ನುವುದು ಆರೋಗ್ಯಕರವಲ್ಲ. ಹೆಚ್ಚಾಗಿ ಬಳಸಬೇಕಾದ ಮೊಳಕೆ ಕಾಳುಗಳು ಮತ್ತು ಸೂಕ್ಷ್ಮ ಹಸಿರು ಆಹಾರಗಳಲ್ಲಿ ಬ್ರೊಕೊಲಿ, ಮೆಂತ್ಯ, ಮೂಲಂಗಿ, ಸೂರ್ಯಕಾಂತಿ, ಪಚ್ಚೆ ಹೆಸರು ಬೀನ್ಸ್ ಮತ್ತು ಕಂದು ಕಡಲೆಗಳು ಸೇರಿವೆ. ಆಸ್ತಮಾ ರೋಗಿಗಳು ಅಧಿಕ ಕೊಬ್ಬಿರುವ ಮಾಂಸವನ್ನು ತ್ಯಜಿಸಬೇಕು. ಆದರೂ ಆಹಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮುನ್ನ ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಮತ್ತು ಸಲಹೆ ನೀಡಲಾದ ಔಷಧ ಸೇವನೆಗಳನ್ನು ಅನುಸರಿಸುವುದನ್ನು ಮುಂದುವರಿಸುವುದು ಮುಖ್ಯವಾಗಿರುತ್ತದೆ.
ಲೇಖಕರು ಶ್ವಾಸಕೋಶ ರೋಗಶಾಸ್ತ್ರ ಸಲಹಾ ತಜ್ಞರು ಸ್ಪೆಷಲಿಸ್ಟ್ ಹಾಸ್ಪಿಟಲ್, ಬೆಂಗಳೂರು.