ಸಿಐಟಿಯು ವತಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರಗಳ ಬಜೆಟ್ ಕುರಿತು ಸಂವಾದ ಕಾರ್ಯಕ್ರಮ

ಉಡುಪಿ ಮತ್ತು ಬ್ರಹ್ಮಾವರ ಸಿಐಟಿಯು ತಾಲೂಕು ಸಮಿತಿಯು ಜಂಟಿ ಆಶ್ರಯದಲ್ಲಿ, ವಿಮಾ ನೌಕರರ ಸಂಘದ ಕಛೇರಿಯಲ್ಲಿ ರಾಜ್ಯ ಮತ್ತು ಕೇಂದ್ರ ಬಜೆಟ್ 2023ರ ಬಗ್ಗೆ ಸಂವಾದ ಕಾರ್ಯಕ್ರಮವು ಫೆ. 28 ರಂದು ನಡೆಯಿತು. ಸಭೆಯ ಅಧ್ಯಕ್ಷ ಸ್ಥಾನವನ್ನು ಸಿಐಟಿಯು ಜಿಲ್ಲಾ ಸಮಿತಿ ಸದಸ್ಯ ಕಾಂ ವಾಮನ ಪೂಜಾರಿ ವಹಿಸಿದ್ದರು.

ಉಡುಪಿ ಜಿಲ್ಲೆಯ ಸಿಐಟಿಯುನ ಕಾರ್ಯದರ್ಶಿ ಕಾಂ ಚಂದ್ರಶೇಖರ್ ಮಾತನಾಡಿ, ಬಜೆಟ್ ನಿಂದ ಜನಸಾಮಾನ್ಯರ ಬದುಕಿನ ಮೇಲೆ ಆಗುವಂತಹ ಸಮಸ್ಯೆಗಳ ಬಗ್ಗೆ ವಿವರಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ಗಳು ಶ್ರೀಮಂತ ಉದ್ದಿಮೆದಾರರ ಪರವಾಗಿದ್ದು ಸಾಮಾನ್ಯ ಜನರಿಗೆ ಸಂಕಷ್ಟ ತರಲಿದೆ ಎಂದು ವಿವರಣೆ ನೀಡಿದರು. ರಾಜ್ಯ ಬಜೆಟ್ ಅಧಿವೇಶನದ ಕೊನೆಯ ದಿನ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದ ಮಸೂದೆಯನ್ನು ಖಂಡಿಸಿದರು. ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳಲ್ಲದೆ, ಬಿಜೆಪಿಯ ಶಾಸಕರೊಬ್ಬರ ತೀವ್ರ ವಿರೋಧದ ನಡುವೆಯೂ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದರು.

ವಿಮಾ ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭಾಕರ್ ಕುಂದರ್ ಮಾತನಾಡಿ, ಬಜೆಟ್ ಎಂಬ ಸಮುದ್ರ ಮಥನದಲ್ಲಿ ಅಮೃತವನ್ನು ಆಳುವವರಿಗೂ ವಿಷವನ್ನು ದುಡಿಯುವ ಜನರಿಗೂ ಹಂಚಲಾಗಿದೆ ಎಂದರು.

ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಕಾಂ ಬಾಲಕೃಷ್ಣ ಶೆಟ್ಟಿ ಮತ್ತು ಸಿಐಟಿಯು ಜಿಲ್ಲಾ ಖಜಾಂಜಿ ಕಾಂ ಶಶಿಧರ ಗೊಲ್ಲ ಸಭೆಯಲ್ಲಿ ಭಾಗವಹಿಸಿದರು.

ನಂತರ ಸಂವಾದ ಕಾರ್ಯಕ್ರಮದಲ್ಲಿ ಜನ ವಿರೋಧಿ ಬಜೆಟ್ ಹಾಗೂ ಕೆಲಸದ ಅವಧಿ ಹೆಚ್ಚಿಸಿದುದನ್ನು ವಿರೋಧಿಸಿ ಜನರ ನಡುವೆ ಪ್ರಚಾರ ನಡೆಸಬೇಕೆಂದು ನಿರ್ಧರಿಸಲಾಯಿತು.

ನಳಿನಿ, ಸಂಜೀವ ನಾಯಕ್, ಅಣ್ಣಪ್ಪ ಪೂಜಾರಿ, ಸುಭಾಸ್ ನಾಯಕ್, ರಂಗನಾಥ ಮತ್ತು ದಯಾನಂದ ಕೊರ್ರಂಗ್ರಪಾಡಿ, ಸಯ್ಯದ್, ರಮೇಶ್, ಮುರುಳಿ, ರಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ತಾಲೂಕು ಸಮಿತಿಯ ಸಹ ಸಂಚಾಲಕ ಉಮೇಶ್ ಕುಂದರ್ ಸ್ವಾಗತಿಸಿ, ಬ್ರಹ್ಮಾವರ ತಾಲೂಕು ಸಮಿತಿ ಸಂಚಾಲಕ ರಾಮ ಕಾರ್ಕಡ ವಂದಿಸಿದರು.