ಮಣಿಪಾಲ: ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರ

ಮಣಿಪಾಲ: ಪ್ರತಿ ವರ್ಷ ನವೆಂಬರ್ 14 ಅನ್ನು ವಿಶ್ವ ಮಧುಮೇಹ ದಿನವನ್ನಾಗಿ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಅಂತಃಸ್ರಾವಶಾಸ್ತ್ರ ವಿಭಾಗವು ಸೋಮವಾರದಂದು ಬೃಹತ್ ಮಧುಮೇಹ ಆರೋಗ್ಯ ಜಾಗೃತಿ ಪ್ರದರ್ಶನ ಮತ್ತು ಉಚಿತ ಮಧುಮೇಹ ತಪಾಸಣಾ ಶಿಬಿರವನ್ನು ಆಯೋಜಿಸಿತ್ತು. “ನಾಳೆಯನ್ನು ರಕ್ಷಿಸಲು ಮದುಮೇಹ ಶಿಕ್ಷಣ” ಈ ವರ್ಷದ ಧ್ಯೇಯ ವಾಕ್ಯವಾಗಿದೆ.

ವಿಶ್ವ ಮಧುಮೇಹ ದಿನವು ಮಧುಮೇಹವನ್ನು ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಜಾಗೃತಿ ಮೂಡಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಇದರ ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ಪರಿಸ್ಥಿತಿಯ ನಿರ್ವಹಣೆಗಾಗಿ ಸಾಮೂಹಿಕವಾಗಿ ಮತ್ತು ವೈಯಕ್ತಿಕವಾಗಿ ಏನು ಮಾಡಬೇಕಾಗಿದೆ ಎಂಬುವುದರ ಕುರಿತು ಜಾಗೃತಿ ಮೂಡಿಸುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಮಧುಮೇಹ, ರಕ್ತದ ಒತ್ತಡ ಮತ್ತು ದೈಹಿಕ ಪರೀಕ್ಷೆಯ ಉಚಿತ ತಪಾಸಣಾ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿಯನ್ನು ಬಿಡುಗಡೆ ಮಾಡಲಾಯಿತು. 5000 ಕ್ಕೂ ಹೆಚ್ಚು ಜನ ಇದರ ಪ್ರಯೋಜನ ಪಡೆದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ , ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ವಿಶ್ವದಲ್ಲೇ ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಈ ರೋಗವನ್ನು ಸೈಲೆಂಟ್ ಕಿಲ್ಲರ್ ಎಂದು ಕರೆಯಲಾಗುತ್ತದೆ ಮತ್ತು ಅಲಕ್ಷಿಸಿದರೆ ದೇಹದ ಎಲ್ಲಾ ಅಂಗಗಳ ಮೇಲೆ ಇದು ಪರಿಣಾಮ ಬೀರುತ್ತದೆ. ಆದ್ದರಿಂದ ಈ ರೋಗದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಾಗಿದ್ದು, ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ ತಮ್ಮ ಕೈಲಾದ ಕೆಲಸವನ್ನು ಮಾಡುತ್ತಿದೆ. ಇದು ಸಮಾಜಕ್ಕೆ ಉತ್ತಮ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಭಾವಿಸುತ್ತೇವೆ ಎಂದರು.

ರೋಗಿಗಳ ಮಧುಮೇಹ ಸ್ವಯಂ ನಿರ್ವಹಣಾ ಡೈರಿ ಬಿಡುಗಡೆ ಮಾಡಿ ಮಾತನಾಡಿದ ಮಾಹೆ ಮಣಿಪಾಲದ ಕುಲಪತಿಗಳಾದ ಲೆ. ಜ. ಡಾ ಎಂ ಡಿ ವೆಂಕಟೇಶ್ , ಭಾರತದಲ್ಲಿ ಸುಮಾರು 8 ಕೋಟಿ ಜನರು ಮತ್ತು ವಿಶ್ವದಲ್ಲಿ ಸುಮಾರು 60 ಕೋಟಿ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ. ವ್ಯೆದ್ಯಲೋಕದಿಂದ ಮಾತ್ರ ಈ ರೋಗವನ್ನು ತಡೆಗಟ್ಟಲು ಸಾಧ್ಯವಿಲ್ಲ, ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಇದನ್ನು ತಪ್ಪಿಸಲು ಅಥವಾ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಉತ್ತಮ ಆರೋಗ್ಯ ದಿನಚರಿಯನ್ನು ಅಭ್ಯಾಸ ಮಾಡಬೇಕು. ಕಾರ್ಯಕ್ರಮವನ್ನು ಸಾರ್ವಜನಿಕರಲ್ಲಿ ಈ ರೀತಿಯ ಜಾಗೃತಿ ಮೂಡಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.

ಕಾರ್ಯಕ್ರಮದ ಗೌರವ ಅಥಿತಿಗಳಾದ ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ಡೀನ್ ಡಾ. ಅರುಣ್ ಜಿ ಮಯ್ಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನಲ್ ಮತ್ತು ಕೆಎಂಸಿಯು ಮಧುಮೇಹ ರೋಗಿಗಳ ಮತ್ತು ಪಾದದ ಬಯೋಮೆಕಾನಿಕಲ್ ವಿಶ್ಲೇಷಣೆಗಾಗಿ ಸರಳವಾದ ಮೂಲಪ್ರತಿಯೊಂದನ್ನು ಅಭಿವೃದ್ಧಿಪಡಿಸಿದೆ. ಇದು ಸ್ಥಿತಿಯನ್ನು ಉತ್ತಮವಾಗಿ ವಿಶ್ಲೇಷಿಸಲು ಸಹಾಯ ಮಾಡುತ್ತದೆ ಎಂದರು.

ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ ಆನಂದ್ ವೇಣುಗೋಪಾಲ್ ಉಪಸ್ಥಿತರಿದ್ದರು. ಮಣಿಪಾಲ ಕೆಎಂಸಿ ಡೀನ್ ಡಾ. ಶರತ್ ಕುಮಾರ್ ಕೆ ರಾವ್ ಸ್ವಾಗತಿಸಿದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ವಂದಿಸಿದರು. ಎಂಡೋಕ್ರೈನಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಸಹನಾ ಶೆಟ್ಟಿ ಅವರು ಮಧುಮೇಹ ಮತ್ತು ಬೃಹತ್ ಮಧುಮೇಹ ಆರೋಗ್ಯ ಪ್ರದರ್ಶನ ಕುರಿತು ಅವಲೋಕನವನ್ನು ನೀಡಿದರು.

ಇದೇ ಸಂದರ್ಭದಲ್ಲಿ ಮಧುಮೇಹ ಕುರಿತ ಪೋಸ್ಟರ್ ಮತ್ತು ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.