ಧೋನಿಯ ಕ್ರಿಕೆಟ್​ ಪಯಣ ಪಿಂಚ್-ಟು-ಜೂಮ್ ಶೈಲಿಯ ವಿಡಿಯೋದ ಮೂಲಕ

2007ರಲ್ಲಿ ಭಾರತದಲ್ಲಿ ನಡೆದ ಪ್ರಥಮ ಟಿ20 ವಿಶ್ವಕಪ್​ನ ಗೆಲುವಿನ ಮೂಲಕ ಅವರ ನಾಯಕತ್ವದ ಶಕ್ತಿ ಇಡೀ ವಿಶ್ವಕ್ಕೆ ಅನಾವರಣ ಆಗಿತ್ತು. ಮೈದಾನದಲ್ಲಿ ಬ್ಯಾಟರ್​ ಯಾವ ಬಾಲ್​ಗೆ ಯಾವ ಶಾಟ್​ ಆಡುತ್ತಾನೆ ಎಂಬ ಲೆಕ್ಕಾಚಾರವನ್ನು ಮೊದಲೇ ಮಾಡಿ ಬೌಲರ್​ಗೆ ಇದೇ ರೀತಿ ಬಾಲ್​ ಮಾಡು ಎಂದು ಹೇಳಿ ವಿಕೆಟ್​ ಉರುಳಿಸುವ ತಂತ್ರಗಾರಿಕೆ ಇದ್ದ ನಾಯಕ. ವಿಕೆಟ್​ ಹಿಂದೆ ಅತ್ಯಂತ ಚುರುಕಾಗಿ ಸ್ಟಂಪ್​ ಮಾಡಿ ವಿಕೆಟ್​​ ಕಬಳಿಸುತ್ತಿದ್ದ ಕೀಪರ್​​.ಭಾರತದ ಯಶಸ್ವಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶೇಷ ಕ್ಷಣಗಳನ್ನು ಚಿತ್ರಿಸಿರುವ ಪಿಂಚ್-ಟು-ಜೂಮ್ ವಿಡಿಯೋವನ್ನು ಅಭಿಮಾನಿಯೊಬ್ಬರು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದು, ಅದು ವೈರಲ್​ ಆಗುತ್ತಿದೆ.

ಅವರು ತಮ್ಮ ಕ್ರೀಡಾ ಜೀವನದ ಅತ್ಯಂತ ಸ್ಫೂರ್ತಿದಾಯಕ ಪ್ರಯಾಣ ಹೊಂದಿದ್ದಾರೆ. ಜಾರ್ಖಂಡ್ ಮೂಲದ ಅವರು, ರೈಲ್ವೇ ನಿಲ್ದಾಣದಲ್ಲಿ ಟಿಕೆಟ್ ಕಲೆಕ್ಟರ್ ಆಗಿ ಕೆಲಸ ಮಾಡುವುದರಿಂದ ಹಿಡಿದು ಭಾರತದ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಐಸಿಸಿ ಟ್ರೋಫಿಗಳನ್ನು ಗೆದ್ದು ಯಶಸ್ವಿ ನಾಯಕರಾದರು.

ಧೋನಿಯ ಬಲಿಷ್ಠ ಫಾರ್ಮ್ಯಾಟ್ ಏಕದಿನ ಪಂದ್ಯವಾಗಿತ್ತು. ಈ ಸ್ವರೂಪದಲ್ಲಿ 350 ಪಂದ್ಯಗಳಲ್ಲಿ 50.57 ಸರಾಸರಿಯಲ್ಲಿ 10,773 ರನ್ ಕಲೆಹಾಕಿದ್ದಾರೆ. ಅವರು ಭಾರತದ ಪರ 10 ಶತಕ ಮತ್ತು 73 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಅವರ ಅತ್ಯತ್ತಮ ಇನ್ನಿಂಗ್ಸ್​ ಅಜೇಯ 183 ರನ್ ಗಳಿಸಿದ್ದಾಗಿದೆ. ವಿಕೆಟ್‌ ಕೀಪರ್-ಬ್ಯಾಟರ್ ಭಾರತದ ಐದನೇ ಅತಿ ಹೆಚ್ಚು ಏಕದಿನ ಸ್ಕೋರರ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ 18,426 ರನ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಇತ್ತೀಚೆಗೆ ಮುಕ್ತಾಯಗೊಂಡ 16ನೇ ಆವೃತ್ತಿಯಲ್ಲಿ ಸಿಎಸ್​ಕೆ ತಂಡ ಮಾಹಿಯ ನಾಯಕತ್ವದಲ್ಲಿ ಐದನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಅತಿ ಹೆಚ್ಚು ಬಾರಿ ಫೈನಲ್​ ಆಡಿದ ತಂಡ ಚೆನ್ನೈ ಎಂಬ ಕೀರ್ತಿಯು ಮಾಹಿಯ ತಂಡಕ್ಕಿದೆ.

ಭಾರತಕ್ಕೆ 2007ರಲ್ಲಿ ಟಿ20 ವಿಶ್ವಕಪ್​, 2011ರಲ್ಲಿ ಏಕದಿನ ವಿಶ್ವಕಪ್​ ಹಾಗೇ 2013 ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ನಾಯಕ ಎಂಎಸ್​ ಧೋನಿ. ಅವರ ಕ್ರಿಕೆಟ್​ ಪ್ರಯಾಣದಿಂದ ಪ್ರೇರಿತರಾದ ಅಭಿಮಾನಿಯೊಬ್ಬರು ಧೋನಿ ಅವರ ಜೀವನದ ಪ್ರಮುಖ ಘಟನೆಗಳನ್ನು ವಿವರಿಸುವ ಪಿಂಚ್-ಟು-ಜೂಮ್ ಶೈಲಿಯ ವಿಡಿಯೋವನ್ನು ಪೋಸ್ಟ್ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದ್ದಾರೆ.

ಎಂಎಸ್​​ ಧೋನಿ 2004 ರಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಅವರು ಭಾರತ ತಂಡಕ್ಕೆ ಪ್ರವೇಶ ಪಡೆಯುವಾಗ ಭರ್ಜರಿ ಸಿಕ್ಸ್​ ಹಿಟ್ಟರ್​ ಎಂಬುದನ್ನು ಸಾಬೀತು ಮಾಡಿದ್ದರು. ತಂಡ ಎಂತಹ ಕಠಿಣ ಸ್ಥಿತಿಯಲ್ಲಿದ್ದರೂ ಅದನ್ನು ಗೆಲುವಿಗೆ ಕೊಂಡೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದರು. ಎಷ್ಟೋ ಪಂದ್ಯಗಳನ್ನು ಧೋನಿ ತಮ್ಮ ಏಕಾಂಗಿ ಆಟದಿಂದ ಗೆಲ್ಲಿಸಿಕೊಟ್ಟಿದ್ದಾರೆ. ಬೌಲರ್​ಗಳ ಜೊತೆ ಸೇರಿ 50 ಪ್ಲಸ್​ ಜೊತೆಯಾಟ ಆಡಿದ ದಾಖಲೆಯಲ್ಲಿ ಧೋನಿ ಹೆಸರಿದೆ. 8, 9ನೇ ವಿಕೆಟ್​ ಸಮಯದಲ್ಲಿ ಶತಕಗಳನ್ನು ದಾಖಲಿಸಿದ್ದಾರೆ. ಭಾರತದ ಬೆಸ್ಟ್​ ಫಿನಿಶರ್​​ ಎಂಬ ಪಟ್ಟ ಅವರಿಗಿದೆ. 2011ರಲ್ಲಿ ಅವರ ಹೆಲಿಕಾಪ್ಟರ್​ ಶಾಟ್​ ಮೂಲಕ ಸಿಕ್ಸ್​​ ಗಳಿಸಿ ವಿಶ್ವಕಪ್​ ಎತ್ತಿದ ಕ್ಷಣವನ್ನು ಯಾವ ಕ್ರಿಕೆಟಿಗನು ಮರೆಯಲಾರರು.