ಧರ್ಮಸ್ಥಳ ಪ್ರಕರಣ: ಎಸ್‌ಐಟಿಯಿಂದ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆ

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ 7,005 ಪುಟಗಳ ಅಂತಿಮ ವರದಿ ಸಲ್ಲಿಸಿದೆ.

ಈ ಹಿಂದೆ 2025ರ ನವೆಂಬರ್‌ 20ರಂದು ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್‌ 215ರ ಅಡಿಯಲ್ಲಿ ಸಿ.ಎನ್. ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಠಲ್ ಗೌಡ ಹಾಗೂ ಸುಜಾತಾ ಭಟ್ ವಿರುದ್ಧ 3,923 ಪುಟಗಳ ‘ಸುಳ್ಳು ಸಾಕ್ಷ್ಯ’ (Perjury) ವರದಿಯನ್ನು ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಆದರೆ, ಆ ವರದಿಯನ್ನು ಸ್ವೀಕರಿಸಲು ನಿರಾಕರಿಸಿದ್ದ ನ್ಯಾಯಾಲಯ, ಸಂಪೂರ್ಣ ತನಿಖೆ ಆಧರಿಸಿದ ಅಂತಿಮ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ಸೂಚಿಸಿತ್ತು.

ನ್ಯಾಯಾಲಯದ ನಿರ್ದೇಶನದಂತೆ, ಎಸ್‌ಐಟಿ ಅಧಿಕಾರಿಗಳು ಈ ಹಿಂದೆ ಸಲ್ಲಿಸಿದ್ದ 3,923 ಪುಟಗಳ ವರದಿ ಹಾಗೂ ಇದೀಗ ಸಿದ್ಧಪಡಿಸಿದ 3,082 ಪುಟಗಳ ವರದಿಯನ್ನು ಸೇರಿಸಿ ಒಟ್ಟು 7,005 ಪುಟಗಳ ಅಂತಿಮ ವರದಿಯನ್ನು 12 ಕಡತಗಳ ರೂಪದಲ್ಲಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಅವರ ನ್ಯಾಯಾಲಯಕ್ಕೆ ಜುಲೈ 15ರಂದು ಸಲ್ಲಿಸಿದರು.

ಈ ವೇಳೆ ಎಸ್‌ಐಟಿ ಎಸ್ಪಿ ಸಿ.ಎ. ಸೈಮನ್, ಇನ್‌ಸ್ಪೆಕ್ಟರ್‌ಗಳಾದ ಕುಸುಮಾಧರ್ ಮತ್ತು ಮಂಜುನಾಥ್ ಸೇರಿದಂತೆ ತನಿಖಾ ತಂಡದ ಅಧಿಕಾರಿಗಳು ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದ ಆರೋಪಿ ಸಿ.ಎನ್. ಚಿನ್ನಯ್ಯ ಕೂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.

ನ್ಯಾಯಾಲಯವು ಅಂತಿಮ ವರದಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.