ಧರ್ಮಸ್ಥಳ: ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸ ಆಗಬಾರದು, ಸಮರ್ಪಕವಾದ ತನಿಖೆ ಆಗಲಿ: ಯು.ಟಿ.ಖಾದರ್

ಮಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ತನಿಖೆಯಾಗಿ ಅದರ ಸತ್ಯಾಸತ್ಯತೆ ಬಯಲಾಗಲಿ. ಸಮರ್ಪಕ ತನಿಖೆಯ ಮೂಲಕ ಎಲ್ಲಾ ವಿಷಯಗಳು ಗೊತ್ತಾಗುತ್ತದೆ. ಯಾವ ಕಾನೂನು ಕ್ರಮ ಆಗಬೇಕು ಅದು ಆಗುತ್ತದೆ. ತನಿಖೆಯ ಮೊದಲೇ ನಾವೇ ಪೂರ್ವಾಧಾರಿತ ತೀರ್ಪು ಕೊಡುವುದು ಬೇಡ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಮಾತನಾಡಿ, ಅದೇ ರೀತಿ ಪಾವಿತ್ರ್ಯತೆಯ ಕ್ಷೇತ್ರಕ್ಕೆ ಧಕ್ಕೆ ತರುವ ಕೆಲಸ ಆಗಬಾರದು. ಒಂದು ಸಂಸ್ಥೆ ಕಟ್ಟಲು ಬಹಳ ಕಷ್ಟವಿದೆ. ಸಂಸ್ಥೆಯಿಂದ ಎಷ್ಟೋ ಜನರಿಗೆ ಇವತ್ತು ಪ್ರಯೋಜನ ಆಗಿದೆ. ಸಮರ್ಪಕವಾದ ತನಿಖೆ ಆಗಲಿ. ಯಾರೇ ತಪ್ಪಿತಸ್ಥರಿದ್ದಾರೆ ಬಹಿರಂಗವಾಗಲಿ ಎಂದು ಹೇಳಿದರು‌.

ಎಸ್ಐಟಿ ತನಿಖೆ ಪ್ರಾರಂಭಿಸುತ್ತದೆ. ತನಿಖೆಗೆ ಬೇಕಾದ ಎಲ್ಲಾ ರೀತಿಯ ಸಹಕಾರ ಕೊಡಬೇಕು. ಸತ್ಯಾಂಶ ಹೊರಬರಲಿ ಯಾರೇ ತಪ್ಪಿತಸ್ಥರಿದ್ದರೂ ಕ್ರಮ ಆಗುತ್ತದೆ. ಎಸ್ಐಟಿ ತನಿಖೆ ಆಗಿ ಸತ್ಯಾಂಶ ಹೊರಗೆ ಬರುವ ತನಕ ಪೂರ್ವಗ್ರಹ ಪೀಡಿತ ತೀರ್ಪುಗಳನ್ನು ಕೊಡುವುದು ಬೇಡ. ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಖಾದರ್ ಹೇಳಿದರು.