ಉಡುಪಿ: ಧರ್ಮಸ್ಥಳ ದೇವಸ್ಥಾನದ ಮೇಲೆ ಕೆಲವು ಮಂದಿ ಯೂಟ್ಯೂಬರ್‌ಗಳ ಅಪಪ್ರಚಾರದಿಂದ ಹಿಂದೂ ಧಾರ್ಮಿಕ ಕೇಂದ್ರದ ಮೇಲಿರುವ ಪವಿತ್ರತೆಗೆ ಧಕ್ಕೆಯಾಗುತ್ತಿದ್ದು, ಇದರ ಹಿಂದೆ ವಿದೇಶಿ ಹಣ ಹರಿದು ಬಂದ ಗುಮಾನಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ.ಡಿ ಮೂಲಕ ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದಾರೆ.
ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದ ವಿರುದ್ಧ ಭಾರೀ ಷಡ್ಯಂತ್ರ ನಡೆದಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಬಹಿರಂಗ ಹೇಳಿಕೆ ನೀಡಿದ್ದು, ಎಡಪಂಥಿಯರ ಒತ್ತಡಕ್ಕೆ ಎಸ್‌ಐಟಿ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಮಂತ್ರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದವರು ಹೇಳಿದ್ದಾರೆ.ರಾಜ್ಯ ಸರಕಾರ ಅನಾಮಧೇಯ ಆರೋಪಿಯನ್ನು ನಂಬಿ ಎಸ್.ಐ.ಟಿ ಮೂಲಕ ಆತ ಕೈ ತೋರಿಸಿದೆಡೆ ಹೊಂಡಾ ಗುಂಡಿಗಳನ್ನು ತೋಡಿ ಗೊಂದಲ ನಿರ್ಮಿಸಿದೆ. ಹಿಂದೂಗಳ ಆರಾಧ್ಯ ದೈವ ಬಾಹುಬಲಿ ಬುಡಕ್ಕೂ ಜೆಸಿಬಿ ನುಗ್ಗಿಸಿದೆ. ಇದೀಗ ಅನಾಮಧೇಯ ಆರೋಪಿ, ನನಗೆ ತಲೆ ಬುರುಡೆ ಕೊಟ್ಟು ಇಂತಹ ಕೆಲಸಗಳಿಗೆ ನಿಯೋಜಿಸಲಾಗಿದೆ ಎಂದು ಪೊಲೀಸರಿಗೆ ತಿಳಿಸಿದ ಬಗ್ಗೆ ಸುದ್ದಿ ಬರುತ್ತಿದೆ ಎಂದವರು ಅಮಿತ್ ಶಾರಿಗೆ ಬರೆದಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನನ್ನ ಪತ್ರವನ್ನು ಗಂಭೀರವಾಗಿ ಪರಿಗಣಿಸಿ, ಈ ಷಡ್ಯಂತ್ರದ ಹಿಂದೆ ವಿದೇಶಿ ಹಣ ಸಂಗ್ರಹಿಸಿ, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಕಳಂಕ ತರಲು ಯತ್ನಿಸಿದ ವ್ಯಕ್ತಿಗಳ ಬಗ್ಗೆ ಇ.ಡಿ ಮೂಲಕ ತನಿಖೆ ನಡೆಸಿ, ಕ್ರಮ ಜರುಗಿಸಬೇಕೆಂದು ಕೇಂದ್ರ ಗೃಹ ಸಚಿವರಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ.












