ಧರ್ಮಸ್ಥಳ ಪ್ರಕರಣ: FSL ವರದಿ ಬರುವವರೆಗೂ ಶವ ಶೋಧ ಕಾರ್ಯಾಚರಣೆ ಸ್ಥಗಿತ; ಗೃಹ ಸಚಿವ ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು: ಧರ್ಮಸ್ಥಳ ಗ್ರಾಮ ಪ್ರಕರಣ ಸಂಬಂಧಿಸಿದಂತೆ ವಿಧಿವಿಜ್ಞಾನದ ಪ್ರಯೋಗಾಲಯದ ವರದಿ ಬರುವವರೆಗೂ ಶವ ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಎಸ್ಐಟಿ ನಿರ್ಧರಿಸಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೋಮವಾರ ಹೇಳಿದರು.

ಸೋಮವಾರ ವಿಧಾನಸಭೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಉತ್ತರಿಸಿದ ಅವರು, ಎಸ್‌ಐಟಿ ಯಾರದೇ ಒತ್ತಡಕ್ಕೆ ಮಣಿಯದೆ ಬಹಳ ಗಂಭೀರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸುತ್ತಿದೆ. ಧರ್ಮಸ್ಥಳದಲ್ಲಿ ಇನ್ನೂ ಎಷ್ಟು ಕಡೆ ಅಗೆಯಬೇಕು, ತನಿಖೆ ಮುಂದಕ್ಕೆ ಹೋಗಬೇಕಾ ಅಥವಾ ಬೇಡವಾ ಎಂಬುದನ್ನು ಎಸ್‌ಐಟಿ ತೀರ್ಮಾನಿಸಲಿದೆ. ಈವರೆಗೆ ಸಿಕ್ಕಿರುವ ಅಸ್ಥಿಪಂಜರ, ಮೂಳೆಗಳು, ಮಣ್ಣಿನ ಮಾದರಿಯನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಆ ವರದಿ ಇನ್ನೂ ಬಂದಿಲ್ಲ. ಹೀಗಾಗಿ ವರದಿ ಬರುವವರೆಗೂ ವಿಚಾರದಲ್ಲಿ ಮುಂದಕ್ಕೆ ಹೋಗದಿರಲು ಎಸ್ಐಟಿ ತೀರ್ಮಾನಿಸಿದೆ ಎಂದು ಹೇಳಿದರು.

ಮಧ್ಯಂತರ ವರದಿ ಇನ್ನೂ ಬಂದಿಲ್ಲ:
ಈ ಪ್ರಕರಣದಲ್ಲಿ ಯಾವುದೇ ವಿಳಂಬ ಆಗುವುದಿಲ್ಲ. ತನಿಖೆ ನಡೆಯುವಾಗ ಹೆಚ್ಚಿನದನ್ನು ಹೇಳಲು ಸಾಧ್ಯವಿಲ್ಲ. ಮಧ್ಯಂತರ ವರದಿ ಇನ್ನೂ ಬಂದಿಲ್ಲ. ಶೀಘ್ರ ಸಂಪೂರ್ಣ ತನಿಖೆ ಮಾಡಿ ಎಂದು ಸರ್ಕಾರ ಎಸ್‌ಐಟಿಗೆ ಹೇಳಬಹುದು. ಆದರೆ, ಎಸ್‌ಐಟಿಗೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಣೆ ಅಥವಾ ದೂಷಣೆ ಮಾಡಲ್ಲ. ಅದರ ಅಗತ್ಯವೂ ಇಲ್ಲ. ಇದರಲ್ಲಿ ಏನನ್ನೂ ಮುಚ್ಚಿಡುವುದಿಲ್ಲ. ಸರ್ಕಾರಕ್ಕೆ ಬೇರೆ ಯಾವ ಉದ್ದೇಶವೂ ಇಲ್ಲ. ವಸ್ತು ಸ್ಥಿತಿ ಸದನದ ಮುಂದಿಟ್ಟಿದ್ದೇನೆ. ಹೀಗಾಗಿ ವಿಪಕ್ಷ ನಾಯಕರು ಹಾಗೂ ಸದಸ್ಯರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಯಾರದ್ದೋ ಒತ್ತಡಕ್ಕೆ ಮಣಿದು ಸರ್ಕಾರ ಎಸ್‌ಐಟಿ ರಚನೆ ಮಾಡಲಿಲ್ಲ. ಧರ್ಮಸ್ಥಳ ಠಾಣೆ ಪೊಲೀಸರಿಗೆ ತನಿಖೆ ನಿರ್ವಹಣೆ ಸಾಧ್ಯವಿಲ್ಲ ಎಂಬ ಕಾರಣಕ್ಕೆ ಎಸ್‌ಐಟಿ ರಚಿಸಿದ್ದೇವೆ. ಸದ್ಯ ಸಿಕ್ಕಿರುವ ಮೂಳೆಗಳು ಯಾರದು? ಕೊಲೆಯೇ? ಅಸಹಜ ಸಾವೇ? ಸಹಜ ಸಾವೇ ಎಂಬುದು ತನಿಖೆಯಿಂದ ಹೊರಬರಬೇಕು. ಇದರಲ್ಲಿ ಯಾವುದೇ ರೀತಿ ರಾಜಿ ಇಲ್ಲ ಎಂದು ಸ್ಪಷ್ಟಪಡಿಸಿದರು.