ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಜೀವನ ಎಲ್ಲರಿಗೂ ಆದರ್ಶ: ಸ್ಮೃತಿ ಇರಾನಿ

ಬೆಳ್ತಂಗಡಿ: ಕರ್ನಾಟಕದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ಆಯೋಜಿಸಲಾಗುವ ಲಕ್ಷದೀಪೋತ್ಸವದ ಅಂಗವಾಗಿ 90 ನೇ ಸರ್ವಧರ್ಮ ಸಮ್ಮೇಳನ ನಡೆಯಿತು. ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಸಮ್ಮೇಳನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಗವಾನ್ ಶಂಕರನಿಗೆ ಸಮರ್ಪಿಸಿದ ದಿವ್ಯ ಆಯೋಜನೆ ಇದು ಎಂದರು. ಈ ಕ್ಷೇತ್ರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಿರುವುದು ಭಾಗ್ಯ. ಧರ್ಮಸ್ಥಳದ ಸೇವಾ ಕಾಯಕ ವಿಶ್ವಕ್ಕೆ ಮಾದರಿ. ಇಲ್ಲಿ ನಡೆಯುವ ಅನ್ನದಾನ, ವಿದ್ಯಾದಾನ, ಆರೋಗ್ಯ ದಾನ ಮತ್ತು ಅಭಯದಾನ ಎಂಬ ಚತುರ್ವಿಧ ದಾನಗಳು ನಿತ್ಯ ಉತ್ಸವವಾಗಿದ್ದು ಕ್ಷೇತ್ರದಲ್ಲಿ ನ್ಯಾಯ, ನೀತಿ ಸತ್ಯ ಮತ್ತು ಧರ್ಮ ನೆಲೆ ನಿಂತಿದೆ. ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಧರ್ಮದ ಸಾಕಾರ ಮೂರ್ತಿಯಾಗಿದ್ದು ಅವರ ಜೀವನ ಎಲ್ಲರಿಗೂ ಆದರ್ಶ ಮತ್ತು ಅನುಕರಣೀಯವೆಂದರು.

 

ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಮೂರನೇ ದಿನ ಶ್ರೀ ಮಂಜುನಾಥಸ್ವಾಮಿಯ ಲಲಿತೋದ್ಯಾನ ಉತ್ಸವ ನಡೆಯಿತು. ದೇವಸ್ಥಾನದ ಒಳಭಾಗದಲ್ಲಿ ಸಕಲ ಶಾಸ್ತ್ರಗಳೊಂದಿಗೆ ಪೂಜೆ ನಡೆಸಿ ಸಂಪ್ರದಾಯದಂತೆ ಜಾಗಟೆ, ಶಂಖ, ನಾದಸ್ವರ, ಡೋಲು, ಸಂಗೀತ ಮೂಲಕ ಹೂಗಳಿಂದ ಮತ್ತು ಆಭರಣಗಳಿಂದ ಅಲಂಕೃತ ಪಲ್ಲಕ್ಕಿಯಲ್ಲಿ ದೇವರ ಪ್ರದಕ್ಷಿಣೆ ನಡೆಯಿತು.

ನಂತರ ಆನೆ, ಬಸವ, ಪಂಜು, ಗೊಂಬೆಗಳ ಮೆರವಣಿಗೆಯ ಜತೆಗೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಲಲಿತೋದ್ಯಾನದಲ್ಲಿಉತ್ಸವ ನಡೆಯಿತು. ಬಳಿಕ ದೇವರನ್ನು ಬೆಳ್ಳಿ ರಥದಲ್ಲಿ ಕೂರಿಸಿ ಮಂಗಳಾರತಿ ಮಾಡಿ, ದೇವಸ್ಥಾನಕ್ಕೆ ಒಂದು ಸುತ್ತಿನ ಪ್ರದಕ್ಷಿಣೆ ನಂತರ ಮತ್ತೆ ದೇವಳದೊಳಗೆ ಕರೆತರಲಾಯಿತು. ಈ ಸಂದರ್ಭ ಹೆಗ್ಗಡೆಯವರ ಕುಟುಂಬಸ್ಥರು, ಕ್ಷೇತ್ರದ ಸಿಬ್ಬಂದಿ, ವೈದಿಕ ಸಮಿತಿಯವರು, ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.