ದೊಡ್ಡಣಗುಡ್ಡೆ: ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ಕಿಕ್ಕಿರಿದ ಭಕ್ತಸಮೂಹದೊಂದಿಗೆ ವರಮಹಾಲಕ್ಷ್ಮಿ ವೃತ ಪೂಜೆ ಸಂಪನ್ನ

ಉಡುಪಿ: ಕರ್ನಾಟಕದಲ್ಲಿ ಪ್ರಥಮ ಹಾಗೂ ಭಾರತದಲ್ಲಿ ದ್ವಿತೀಯ ಸನ್ನಿಧಾನವೆನಿಸಿದ ಉಡುಪಿ ದೊಡ್ಡಣಗುಡ್ಡೆಯ ಶ್ರೀಚಕ್ರಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಶ್ರೀ ಕುಬೇರ ಚಿತ್ರಲೇಖಾ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ವರಮಹಾಲಕ್ಷ್ಮಿ ವೃತ ಪೂಜೆಯು ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜೀ ಮಾರ್ಗದರ್ಶನದಲ್ಲಿ ಹಾಗೂ ವೇದಮೂರ್ತಿ ಕೃಷ್ಣಮೂರ್ತಿ ತಂತ್ರಿಗಳ ನೇತ್ರತ್ವದಲ್ಲಿ ನೆರವೇರಿತು.

ಶ್ರಾವಣ ಮಾಸದ ಶುಕ್ಲಪಕ್ಷದ ಹುಣ್ಣಿಮೆಯ ಶುಕ್ರವಾರದಂದು ಸಂಜೆ ನೆರವೇರಿದ ಈ ಪೂಜೆಯಲ್ಲಿ ಕ್ಷೇತ್ರ ಉಸ್ತುವಾರಿ ಶ್ರೀಮತಿ ಕುಸುಮ ನಾಗರಾಜ್ ದೀಪ ಪ್ರಜ್ವಲಿಸಿ ವರಮಹಾಲಕ್ಷ್ಮಿ ವೃತ ಪೂಜೆಗೆ ಚಾಲನೆ ನೀಡಿದರು. ಪಂಚವರ್ಣತ್ವಿಕವಾಗಿ ರಚಿಸಲಾದ ಮಂಡಲದಲ್ಲಿ ಕಲಶ ಪ್ರತಿಷ್ಠಾಪಿಸಿ ಲಕ್ಷ್ಮಿಯನ್ನು ಆಹ್ವಾನಿಸಿ ವಿವಿಧ ಕುಸುಮಗಳಿಂದ ಪೂಜಿಸಿ, ವಿವಿಧ ನಾಮಾವಳಿಗಳಿಂದ ಅರ್ಚಿಸಿ, ಸಹಸ್ರನಾಮಾವಳಿಯಿಂದ ಸ್ತುತಿಸಿ, ಸುಮಂಗಲಿಯರಿಂದ ಕುಂಕುಮವನ್ನು ಅರ್ಪಿಸಿ ಬಗೆಬಗೆಯ ನೈವೇದ್ಯವನ್ನಿಟ್ಟು ವಿಧವಿಧದ ಆರತಿಯನ್ನು ಬೆಳಗಿ ಪೂಜಿಸಲಾಯಿತು.

ಸುಮಂಗಲಿಯರಿಗಾಗಿಯೇ ಮೀಸಲಾಗಿರುವ ಈ ವಿಶೇಷ ಪೂಜೆಯಲ್ಲಿ ಕಿಕ್ಕಿರಿದ ಭಕ್ತಸಮೂಹ ಕ್ಷೇತ್ರದ ಪೂಜೆಯಲ್ಲಿ ಪಾಲ್ಗೊಂಡಿತು. ಪೂಜೆಯ ಅಂಗವಾಗಿ ಬ್ರಾಹ್ಮಣ ಸುವಾಸಿನಿ ಆರಾಧನೆ, ಬ್ರಾಹ್ಮಣರಾಧನೆ ಹಾಗೂ ರಾತ್ರಿ ಮಹಾ ಅನ್ನಸಂತರ್ಪಣೆ ನೆರವೇರಿತು.

ಕ್ಷೇತ್ರದ ಆನಂದ ಬಾಯರಿ ಶ್ರೀ ದುರ್ಗಾ ಆದಿಶಕ್ತಿ ದೇವಿಯನ್ನು ವಿಶೇಷವಾಗಿ ಅಲಂಕರಿಸಿದ್ದರು. ರಾತ್ರಿಯ ಮಹಾ ಪೂಜೆಯನ್ನು ಅರ್ಚಕ ಅನಿಶಾಚಾರ್ಯ ನೆರವೇರಿಸಿದರು. ಗಾನ ನಾಟ್ಯ ಪ್ರಿಯಳಾದ ಶ್ರೀ ದುರ್ಗಾ ಆದಿಶಕ್ತಿ ದೇವಿಗೆ ವಿಶೇಷ ಸಂಗೀತ ಸೇವೆಯನ್ನು ಪ್ರೊಫೆಸರ್ ಅರವಿಂದ ಹೆಬ್ಬಾರ್ ಹಾಗೂ ಲತಾಂಗಿ ಸಿಸ್ಟರ್ಸ್ ನ ಕುಮಾರಿ ಸಮನ್ವಿ ಸಮರ್ಪಿಸಿದರು.

ಈ ಬಾರಿ ವಿಶೇಷವಾಗಿ ಶುಕ್ರವಾರದ ದಿನವೇ ಹುಣ್ಣಿಮೆಯು ಇರುವುದರಿಂದ ವರಮಹಾಲಕ್ಷ್ಮೀ ವೃತ ಪೂಜೆಯಿಂದ ವಿಶೇಷ ಫಲಗಳು ಪ್ರಾಪ್ತವಾಗಲಿದೆ. ಕ್ಷೇತ್ರದಲ್ಲಿ ನೂತನವಾಗಿ ಪ್ರತಿಷ್ಠಾಪನೆಗೊಂಡಿರುವ ಬಹು ಅಪರೂಪದ ಸನ್ನಿಧಾನವಾದ ಶ್ರೀ ಕುಬೇರ ಚಿತ್ರಲೇಖಾ ಸಹಿತವಾದ ಮಹಾಲಕ್ಷ್ಮಿಯ ಸನ್ನಿಧಾನದಲ್ಲಿ ನೆರವೇರಿದ ಪ್ರಥಮ ವರಮಹಾಲಕ್ಷ್ಮಿ ವೃತ ಪೂಜೆಯಲ್ಲಿ ಸುಮಂಗಲಿಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸನ್ನಿಧಾನದ ಆರಾಧನೆಯಿಂದ ದಾರಿದ್ರ್ಯವು ನಾಶವಾಗಿ ಸುಖ ಸಂಪತ್ತು ಪ್ರಾಪ್ತಿಯಾಗಲಿದೆ ಎಂದು ಪ್ರತೀತಿ ಇರುವ ಹಿನ್ನೆಲೆಯಲ್ಲಿ ಭಕ್ತರು ಕ್ಷೇತ್ರದಲ್ಲಿ ಕಿಕ್ಕಿರಿದು ತುಂಬಿದ್ದರು. ಕ್ಷೇತ್ರ ಸಂದರ್ಶನವನ್ನು ಮಾಡಿದ ಸಮಸ್ತ ಭಕ್ತರಿಗೂ ಶುಭವಾಗಲಿ ಎಂದು ಶ್ರೀ ರಮಾನಂದ ಗುರೂಜಿ ಆಶೀರ್ವಚನ ನೀಡಿದ್ದಾರೆ.