ದೇಶದ ಚಲನಚಿತ್ರೋದ್ಯಮದಲ್ಲೇ ಸಂಚಲನ ಸೃಷ್ಟಿಸಿರುವ ‘ಕಾಂತಾರ’ ಭಾರತೀಯ ಚಿತ್ರರಂಗದಲ್ಲಿ ಇದುವರೆಗೆ ತೆರೆಕಂಡ ಅತ್ಯುತ್ತಮ ಚಲನಚಿತ್ರಗಳ ಸ್ಥಾನಮಾನವನ್ನು ಗಳಿಸಿದೆ. ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಈ ಚಿತ್ರವು ರಾಷ್ಟ್ರಪ್ರಶಸ್ತಿಯನ್ನು ಪಡೆಯುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಅಲ್ಲದೆ ಗಲ್ಲಾ ಪೆಟ್ಟಿಗೆ ಸಂಗ್ರಹಣೆಯೂ ದಿನೇ ದಿನೇ ಏರುತ್ತಲೇ ಇದೆ.
ಹೊಂಬಾಳೆ ಫಿಲಂಸ್ ನಿರ್ಮಾಣದ ‘ಕಾಂತಾರ’ ರಜಾ ದಿನವಲ್ಲದೆ, ಕೆಲಸದ ದಿನಗಳಲ್ಲೂ ಹೌಸ್ ಫುಲ್ ಓಡುತ್ತಿದ್ದು, ಬುಕ್ ಮೈ ಶೋ ವೆಬ್ ಸೈಟ್ ನಲ್ಲಿ ಸಿನಿಮಾ ನೋಡುಗರಿಂದ ಟಿಕೆಟ್ ಗೆ ಭಾರಿ ಬೇಡಿಕೆ ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಕಾಂತಾರ 18 ಸಾವಿರಕ್ಕೂ ಹೆಚ್ಚು ವಿಮರ್ಶೆಗಳೊಂದಿಗೆ ತನ್ನ ಇತಿಹಾಸದಲ್ಲಿ ಅತ್ಯುತ್ತಮ ರೇಟಿಂಗ್ ಪಡೆದ ಚಲನಚಿತ್ರವಾಗಿದೆ ಎಂದು ಬಿ.ಎಮ್.ಎಸ್ ಅಧಿಕೃತವಾಗಿ ಘೋಷಿಸಿದೆ.
ಚಲನಚಿತ್ರವು ಪ್ರಸ್ತುತ 99% ರೇಟಿಂಗ್‌ಗಳನ್ನು ಹೊಂದಿದೆ. ಕೇವಲ ಬುಕ್ ಮೈ ಶೋನಲ್ಲಿ ಮಾತ್ರವಲ್ಲದೆ, ಐ.ಎಮ್.ಡಿ.ಬಿ ರೇಟಿಂಗ್ ನಲ್ಲಿ 6.1ಸಾವಿರ ಬಳಕೆದಾರರಿಂದ 9.7 ರೇಟಿಂಗ್‌ಗಳನ್ನು ಹೊಂದಿದೆ, ಇದು ಈ ವೇದಿಕೆಯಲ್ಲಿ ಅತಿ ಹೆಚ್ಚು ರೇಟಿಂಗ್ ಪಡೆದ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಒಟ್ಟಾರೆಯಾಗಿ ಕಾಂತಾರದ ಗುಂಗು ಇನ್ನೂ ಹಲವು ದಿನಗಳವರೆಗೆ ಇಳಿಯುವ ಯಾವ ಲಕ್ಷಣಗಳೂ ಸದ್ಯಕ್ಕಂತೂ ಕಾಣುತ್ತಿಲ್ಲ.