ಕಾಶ್ಮೀರದಲ್ಲಿ ಅನುರಣಿಸಿತು ಕರಾವಳಿಯ ಗಂಡುಕಲೆ ಯಕ್ಷಗಾನ!! ನವರಾತ್ರಿಗೆ ವೈಷ್ಣೋದೇವಿ ಮಂದಿರದಲ್ಲಿ ಪ್ರದರ್ಶನಕ್ಕೆ ಗವರ್ನರ್ ರಿಂದ ಆಹ್ವಾನ!

ಶ್ರೀನಗರ: ಅ.2 ರಂದು ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ವತಿಯಿಂದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮ ನಡೆಯಿತು

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ, ಕರ್ನಾಟಕದ 2 ಕಲಾ ಪ್ರಕಾರಗಳು ದೇಶದ ಮುಕುಟದ ಮಣಿ ಕಾಶ್ಮೀರದಲ್ಲಿ ಪ್ರದರ್ಶನ ಕಂಡದ್ದು ಅತ್ಯಂತ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಪಟ್ಲ ಸತೀಶ್‌ ಶೆಟ್ಟಿ ನೇತೃತ್ವದಲ್ಲಿ ಪಾವಂಜೆ ಮೇಳದ ಕಲಾವಿದರು ಪ್ರದರ್ಶಿಸಿದ ಕಟೀಲು ಶ್ರೀದೇವಿ ಮಹಾತ್ಮೆ ಯಕ್ಷಗಾನ ವೀಕ್ಷಿಸಿ ಅಭಿನಂದಿಸಿದ ಸಿನ್ಹಾ, ಕಲೆ ಸಮಾಜವನ್ನು ಒಗ್ಗೂಡಿಸುತ್ತದೆ, ಸಮಾಜ ಜಾಗೃತಗೊಂಡಾಗ ರಾಷ್ಟ್ರ ನಿರ್ಮಾಣ ಸಾಧ್ಯ. ದೇಶದ ವೈವಿಧ್ಯಮಯ ಕಲೆಗಳು ಈ ಕಾರ್ಯವನ್ನು ಮಾಡುತ್ತಿವೆ. ವಿದ್ಯುತ್‌ ಇಲಾಖೆ ಪ್ರಿನ್ಸಿಪಲ್‌ ಸೆಕ್ರೆಟರಿ ರಾಜೇಶ್‌ ಪ್ರಸಾದ್‌ ಅವರು ಗಾಂಧಿ ಜಯಂತಿಯಂದು ಯಕ್ಷಗಾನ ಕಾರ್ಯಕ್ರಮ ಏರ್ಪಡಿಸುವ ಬಗ್ಗೆ ಕೇಳಿಕೊಂಡಾಗ ಖುಷಿಯಿಂದ ಒಪ್ಪಿಗೆ ನೀಡಿದ್ದು, ಯಕ್ಷಗಾನ ಕಾರ್ಯಕ್ರಮವು ಜಮ್ಮು-ಕಾಶ್ಮೀರದ ಸಭಿಕರನ್ನು ಮಂತ್ರಮುಗ್ಧಗೊಳಿಸಿದೆ ಎಂದ ಅವರು ನವರಾತ್ರಿ ವೇಳೆಗೆ ಜಮ್ಮುವಿನ ವೈಷ್ಣೋದೇವಿ ಮಂದಿರದಲ್ಲಿ ತಂಡವು ಮತ್ತೊಮ್ಮೆ ಇದೇ ಪ್ರದರ್ಶನ ನೀಡಬೇಕು ಎಂದು ಆಹ್ವಾನ ನೀಡಿದರು.

ಯಕ್ಷಧ್ರುವ ಪಟ್ಲ ಫೌಂಡೇಷನ್‌ ಮುಖ್ಯಸ್ಥ ಪಟ್ಲ ಸತೀಶ್‌ ಶೆಟ್ಟಿ ಮತ್ತು ಫೌಂಡೇಷನ್‌ನ ದೆಹಲಿ ಘಟಕದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಅವರನ್ನು ಲೆ.ಗವರ್ನರ್‌‌ ಮನೋಜ್‌ ಸಿನ್ಹಾ ಸರ್ಕಾರದ ವತಿಯಿಂದ ಸನ್ಮಾನಿಸಿದರು.

ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರದ ಕಲಾವಿದರು ಶಾಸ್ತ್ರೀಯ, ಜನಪದ ನೃತ್ಯ ಪ್ರದರ್ಶನ ನೀಡಿದರು.