ಫೆ.15ರಂದು ಕರಾವಳಿಯಾದ್ಯಂತ ‘ದೇಯಿ ಬೈದೆತಿ’ ತುಳುಚಿತ್ರ ತೆರೆಗೆ: ನಿರ್ದೇಶಕ ಪೆರಂಪಳ್ಳಿ

ಉಡುಪಿ: ಸಂಕ್ರಿ ಮೋಷನ್‌ ಪಿಕ್ಚರ್‌ ಬ್ಯಾನರ್‌ನಡಿ 1.15 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ‘ದೇಯಿ ಬೈದೆತಿ’ ಐತಿಹಾಸಿಕ ತುಳು ಚಲನಚಿತ್ರ ಫೆಬ್ರುವರಿ 15ರಂದು ಕರಾವಳಿಯಾದ್ಯಂತ ತೆರೆಗೆ ಅಪ್ಪಳಿಸಲಿದೆ, ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ದೇಶಕ ಸೂರ್ಯೋದಯ್‌ ಪೆರಂಪಳ್ಳಿ ಈ ಬಗ್ಗೆ ಮಾಹಿತಿ ನೀಡಿ,  ಉಡುಪಿ ಕಲ್ಪನಾ ಚಿತ್ರಮಂದಿರ ಸೇರಿದಂತೆ ಕರಾವಳಿಯ ಏಳು ಚಿತ್ರಮಂದಿರಗಳಲ್ಲಿ ಹಾಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರ ತೆರೆ ಕಾಣಲಿದೆ ಎಂದರು.

ಕನ್ನಡ ಹಾಗೂ ತುಳು ಎರಡು ಭಾಷೆಗಳಲ್ಲಿ ಈ ಚಿತ್ರವನ್ನು ತಯಾರಿಸಲಾಗಿದೆ. ಮೊದಲು ತುಳು ಚಿತ್ರವನ್ನು ಬಿಡುಗಡೆ ಮಾಡಿ, ಬಳಿಕ ಕನ್ನಡ ಚಿತ್ರವನ್ನು ತೆರೆಗೆ ತರಲಾಗುವುದು. ತುಳುನಾಡಿನಲ್ಲಿ ಬಲ್ಲಿದರ ಪರವಾಗಿ ಪರಾಕ್ರಮ ತೋರಿದ ರಣರಂಗದಲ್ಲಿಯೇ ಪ್ರಾಣಾರ್ಪಣೆ ಮಾಡಿದ ವೀರ ಪುರುಷರುಗಳಾದ ಕೋಟಿ–ಚೆನ್ನೆಯರ ತಾಯಿ ದೇಯಿ ಬೈದೆತಿಯ ಜೀವನಗಾಥೆ ಈ ಚಿತ್ರದ ಕಥಾಹಂದರ. ಚಿತ್ರಕ್ಕೆ ಸೆನ್ಸಾರ್‌ ಮಂಡಳಿಯಿಂದ ಯು ಪ್ರಮಾಣ ಪತ್ರ ದೊರೆತಿದೆ.

ಈಗಾಗಲೇ ತುಳುನಾಡಿನ ಸಂಘ ಸಂಸ್ಥೆಗಳು ಹಲವು ಶೋಗಳ ಟಿಕೆಟ್‌ಗಳನ್ನು ಮುಂಗಡವಾಗಿ ಬುಕ್ಕಿಂಗ್‌ ಮಾಡುವ ಮೂಲಕ ತುಳು ಚಿತ್ರರಂಗದಲ್ಲಿಯೇ ಹೊಸ ದಾಖಲೆಯನ್ನು ನಿರ್ಮಿಸಿದೆ ಎಂದರು.

ಅದ್ದೂರಿ ಸೆಟ್:

ಹಿರಿಯಡಕ ಸಮೀಪದ ಶಿರೂರು ಮೂಲ ಮಠದಲ್ಲಿ 500 ವರ್ಷಗಳ ಹಿಂದಿನ ಕಾಲಕ್ಕೆ ಸರಿ ಹೊಂದುವ ಅದ್ಧೂರಿ ಸೆಟ್‌ ಹಾಕಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲಾಗಿದೆ. ಹಾಗೆಯೇ ಪಡುಮಲೆ, ಪರ್ಕಳದ ಶೆಟ್ಟಿಬೆಟ್ಟಿನ ಅರಮನೆ ಹಾಗೂ ಉಳಿದ ಭಾಗಗಳನ್ನು ಕರಾವಳಿ ಭಾಗದಲ್ಲಿ ಚಿತ್ರಿಕರಣ ಮಾಡಲಾಗಿದೆ ಎಂದರು. ಚಿತ್ರಕ್ಕೆ ಬಿ. ಭಾಸ್ಕರ್‌ ರಾವ್‌ ಸಂಗೀತ ನೀಡಿದ್ದು, ಮಣಿಕಾಂತ್‌ ಕದ್ರಿ ಹಿನ್ನೆಲೆ ಸಂಗೀತ ನೀಡಿದ್ದಾರೆ. ರವಿ ಸುವರ್ಣ ಹಾಗೂ ಹರೀಶ್‌ ಪೂಜಾರಿ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮೋಹನ್‌ ಎಲ್‌ ಸಂಕಲನದ ಜವಾಬ್ದಾರಿ ನಿರ್ವಹಿಸಿದ್ದಾರೆ. ದೇವರಾಜ್‌ ಪಾಲನ್‌ ರಾಜ್‌ ಕೃಷ್ಣ, ಅಮೀತ್‌ ರಾವ್‌ ಅವರು ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

ಕಲಾ ನಿರ್ದೇಶಕರಾಗಿ ರವಿ ಪೂಜಾರಿ ಹಿರಿಯಡಕ ಹಾಗೂ ದಿನೇಶ್‌ ಸುವರ್ಣ ಕೈಚಳಕ ತೋರಿಸಿದ್ದಾರೆ. ಸಾಹಿತ್ಯ, ಚಿತ್ರಕಥೆ, ಸಂಭಾಷಣೆ, ನಿರ್ಮಾಣ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ನಾನು ನಿರ್ವಹಿಸಿದ್ದೇನೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಸೀತಾ ಕೋಟೆ, ಚೇತನ್‌ ರೈ ಮಾಣೆ, ಸೌಜನ್ಯ ಹೆಗ್ಡೆ, ಅಮಿತ್‌ ರಾವ್‌ ಮೊದಲಾದವರು ಅಭಿನಯಿಸಿದ್ದಾರೆ ಎಂದು ಹೇಳಿದರು. ಜಾನಪದ ವಿದ್ವಾಂಸರಾದ ಬಾಬು ಅಮೀನ್‌ ಬನ್ನಂಜೆ, ದಾಮೋದರ ಕಲ್ಮಾಡಿ, ಚೆಲುವರಾಜ್‌ ಪೆರಂಪಳ್ಳಿ, ನಟ ಅಮಿತ್‌ ರಾವ್‌ ಇದ್ದರು.