ಮುಂಬಯಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಪತನವಾಗಿ ಶಿವಸೇನಾ ನಾಯಕ ಉದ್ದವ್ ಠಾಕ್ರೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ದೇವೇಂದ್ರ ಫಡ್ನವಿಸ್ ಅವರ ನಾಯಕತ್ವದ ಬಿಜೆಪಿ ಏಕೈಕ ದೊಡ್ಡ ಪಕ್ಷ ವಾಗಿದ್ದು, ಸರ್ಕಾರ ರಚಿಸಲು ಹಕ್ಕು ಸಾಧಿಸಬಹುದು. ಬಿಜೆಪಿ ಬಳಿ 106 ಶಾಸಕರಿದ್ದು, ಮ್ಯಾಜಿಕ್ ಫಿಗರ್ 144 ರಿಂದ ತುಸುವೆ ದೂರವಿದೆ. ಸರಕಾರ ರಚಿಸಲು ಬಹುಮತ ಸಾಬೀತು ಪಡಿಸುವ ಅಗತ್ಯವಿದ್ದು, 156 ಶಾಸಕರ ಬೆಂಬಲವಿದೆ ಎನ್ನಲಾಗಿದೆ.
ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿ ಪಾಳಯದಲ್ಲಿ ಸಂತಸದ ವಾತಾವರಣವಿದೆ. ದೇವೇಂದ್ರ ಫಡ್ನವಿಸ್ ನೇತೃತ್ವದ ಸರ್ಕಾರ ರಚನೆಯ ಹಾದಿ ಈಗ ಸುಗಮವಾಗಿದೆ. ಅದಾಗ್ಯೂ, ಏಕನಾಥ್ ಶಿಂಧೆ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ. ಹೊಸ ಸರ್ಕಾರ ರಚಿಸಲು ಏಕನಾಥ್ ಶಿಂದೆ ತೆಗೆದುಕೊಳ್ಳುವ ನಿರ್ಧಾರ ಅಂತಿಮವಾಗಲಿದೆ.
ಉದ್ಧವ್ ಠಾಕ್ರೆ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಶಿವಸೇನೆ ಬಂಡಾಯ ನಾಯಕ ದೀಪಕ್ ಕೇಸರ್ಕರ್, “ಅವರ ರಾಜೀನಾಮೆ ನಮಗೆ ಸಂತೋಷದ ವಿಷಯವಲ್ಲ, ಅವರು ನಮ್ಮ ನಾಯಕರು, ಈಗ ನಾವು ನಮ್ಮ ಎಲ್ಲಾ ಶಾಸಕರೊಂದಿಗೆ ಸಭೆ ನಡೆಸುತ್ತೇವೆ ಮತ್ತು ಮಹಾರಾಷ್ಟ್ರದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.