ವಿದ್ಯಾರ್ಥಿಗಳ ಸಮರ್ಥ ನಾಯಕತ್ವದಿಂದ ಸಮಾಜದ ಬೆಳವಣಿಗೆ ಸಾಧ್ಯ: ಈಶಪ್ರಿಯ ತೀರ್ಥ ಸ್ವಾಮೀಜಿ

ಉಡುಪಿ: ವಿದ್ಯಾರ್ಥಿಗಳಲ್ಲಿ ಇರುವ ಸಮರ್ಥ ನಾಯಕತ್ವದ ಗುಣವು ಸಮಸ್ತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರ ದೀಪವಾಗುವುದು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಂಸ್ಥೆಯನ್ನು ಸಮಾಜವನ್ನು ಬೆಳೆಸುವಂತಾಗಲಿ ಎಂದು ಅದಮಾರು ಮಠದ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಈಶಪ್ರಿಯ ತೀರ್ಥ ಸ್ವಾಮೀಜಿಗಳು ಅಭಿಪ್ರಾಯ ಪಟ್ಟರು.

ಅವರು ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು ಉಡುಪಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಶೀರ್ವದಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಆಗಮಿಸಿದ ರಾಷ್ಟ್ರ ಮಟ್ಟದ ವ್ಯಕ್ತಿತ್ವ ವಿಕಸನ ತರಬೇತುದಾರ ಪ್ರೊ.ರಾಜೇಂದ್ರ ಭಟ್ ಮಾತನಾಡಿ, ಭಾರತದ ಅದ್ಭುತ ಅಂತಃಸತ್ವಕ್ಕೆ ಯುವಸಮೂಹವೇ ಪ್ರೇರಣಾ ಶಕ್ತಿಯಾಗಲಿ. ಶೇಕಡಾ ಅರುವತ್ತಕ್ಕಿಂತಲೂ ಹೆಚ್ಚು ಯುವಶಕ್ತಿಯನ್ನು ಹೊಂದಿದ ನಮ್ಮ ದೇಶ ಭಾರತ, ಆಧುನಿಕ ಜಗತ್ತಿನ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾ ಮುನ್ನುಗ್ಗುತ್ತಿದೆ. ಸಂವೇದನಾಶೀಲತೆ ಹಾಗೂ ಮೌಲ್ಯಗಳನ್ನು ಒಳಗೊಂಡ ನಮ್ಮ ಯುವಜನತೆ ಭಾರತವನ್ನು ಮತ್ತೆ ವಿಶ್ವಗುರುವನ್ನಾಗಿಸಲಿ ಎಂದು ಹಾರೈಸಿದರು.

ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಸಿ.ಎ.ಟಿ ಪ್ರಶಾಂತ್ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು.

ಪ್ರಾಂಶುಪಾಲೆ ಡಾ.ಸುಕನ್ಯಾ ಮೇರಿ.ಜೆ ವಿದ್ಯಾರ್ಥಿ ನಾಯಕರುಗಳಿಗೆ ಪ್ರಮಾಣ ವಚನ ಬೋಧಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಲವಿಟಾ ಡಿಸೋಜ, ಹಾಗೂ ಉಪಪ್ರಾಂಶುಪಲ ವಿನಾಯಕ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದಾಧಿಕಾರಿಗಳಾಗಿ ವಿದ್ಯಾ, ಸುಮಂತ್, ಶಶಿಕಿರಣ್ ಇವರು ಉಪಸ್ಥಿತರಿದ್ದರು.

ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಚಂದ್ರಕಾಂತ್ ಭಟ್ ಅವರು ಸ್ವಾಗತಿಸಿ, ವಿದ್ಯಾರ್ಥಿ ಸಂಘದ ನಾಯಕಿ ಸೌಜನ್ಯ ಅವರು ವಂದಿಸಿದರು‌. ದೀಪಕ್ ಕಾಮತ್ ಎಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.