ಮಣಿಪಾಲ: ಯುವಕರು ಹೊಸ ಆವಿಷ್ಕಾರ, ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸಿ ಹೊಸ ಕಂಪನಿ, ಸಂಶೋಧನಾ ಸಂಸ್ಥೆ ಮತ್ತು ಸ್ಟಾರ್ಟ್ ಅಪ್ ಗಳನ್ನು ಸ್ಥಾಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಲಿಷ್ಠ ಮತ್ತು ಸ್ವಾವಲಂಬಿ ‘ಹೊಸ ಭಾರತ’ದ ಕನಸನ್ನು ಸಾಕಾರಗೊಳಿಸಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ ಕರೆ ನೀಡಿದರು.
ಅವರು ಶುಕ್ರವಾರದಂದು ಮಾಹೆಯ 30 ನೇ ಘಟಿಕೋತ್ಸವದ ಮೊದಲನೆ ದಿನ ಮತ್ತು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ನ ಹೊಸ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ದೇಶದ ಯುವಕರ ಶಕ್ತಿಯನ್ನು ಜಗತ್ತೇ ಗುರುತಿಸುತ್ತಿದೆ. ಗೂಗಲ್, ಮೈಕ್ರೋಸಾಫ್ಟ್, ಅಡೋಬ್, ಮತ್ತು ಐಬಿಎಂ ನಂತಹ ಪ್ರಮುಖ ಕಂಪನಿಗಳು ಭಾರತೀಯರನ್ನು ಗೌರವಯುತ ಸ್ಥಾನಗಳಿಗೆ ನೇಮಿಸಿಕೊಳ್ಳುತ್ತಿವೆ ಎಂದರು.
ಶಿಕ್ಷಣ ಮತ್ತು ಸಂಶೋಧನೆಗೆ ನೀಡಿರುವ ಕೊಡುಗೆಗಾಗಿ ಮಾಹೆಯ ಶೈಕ್ಷಣಿಕ ವಿದ್ಯಾ ಸಮೂಹ ಸಂಸ್ಥೆಯನ್ನು ಶ್ಲಾಘಿಸಿದ ಅವರು, ಪದವಿ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಅಡೆತಡೆಗಳ ನಡುವೆಯೂ ಮುಂದುವರಿದು ಉತ್ತಮ ಭವಿಷ್ಯವನ್ನು ರೂಪಿಸಲು ಅವರಿಗೆ ಪ್ರೋತ್ಸಾಹ ನೀಡಿದರು. ವಿಶೇಷ ವಿದ್ಯಾರ್ಥಿನಿಯರು ಸಮೃದ್ಧ ‘ಹೊಸ ಭಾರತ’ದ ಬಲವಾದ ಆಧಾರ ಸ್ತಂಭಗಳಾಗುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಅತ್ಯಂತ ಪ್ರತಿಷ್ಠಿತ ಸಂಸ್ಥೆಯಾಗಿದ್ದು ಪ್ರಪಂಚದಾದ್ಯಂತ ಸಂಶೋಧನೆ ಮತ್ತು ನಾವೀನ್ಯತೆಗಾಗಿ ಪ್ರಸಿದ್ದಿ ಹೊಂದಿದೆ. ಮಣಿಪಾಲದ ಶಿಕ್ಷಣ ಸಂಸ್ಥೆಗಳು ಡಾ ಟಿಎಂಎ ಪೈ ಅವರ ಮೌಲ್ಯಗಳನ್ನು ಪ್ರತಿಬಿಂಬಿಸುತ್ತದೆ. ತನ್ನ ಸಮಯಕ್ಕಿಂತ ಮುಂದಿದ್ದ ಪೈಗಳದ್ದು ದೂರದರ್ಶಿ ವ್ಯಕ್ತಿತ್ವ, ಅವರೊಬ್ಬ ಸಂಘಟಕ ಮತ್ತು ಶೈಕ್ಷಣಿಕ ಸಂಸ್ಥೆಗಳ ನಿರ್ಮಾತೃ. ಶಿಕ್ಷಣ ಮಾತ್ರವಲ್ಲದೆ ಬ್ಯಾಂಕಿಗ್ ಕ್ಷೇತ್ರದಲ್ಲಿಯೂ ಕೊಡುಗೆ ಸಲ್ಲಿಸಿದ್ದಾರೆ. ಮಾಹೆ ಸಂಸ್ಥೆಯು ಕೇವಲ ವಿದ್ಯೆ ನೀಡುವುದಲ್ಲದೆ, ವಿದ್ಯಾರ್ಥಿಗಳಿಗೆ ವೃತ್ತಿ ಜೀವನವನ್ನು ಕಟ್ಟಿಕೊಟ್ಟಲು ಸಹಾಯ ಮಾಡುತ್ತದೆ. ಮೈಕ್ರೋಸಾಫ್ಟ್ ಅನ್ನು ಮುನ್ನಡೆಸುತ್ತಿರುವ ಸತ್ಯ ನಾದೆಲ್ಲಾ ಇದಕ್ಕೆ ಉದಾಹರಣೆ. ಇಂತಹ ನೂರಾರು ಸತ್ಯ ನಾದೆಲ್ಲಾಗಳು ಭಾರತ ಮತ್ತು ಜಗತ್ತನ್ನು ಮುನ್ನಡೆಸುವುದನ್ನು ನಾನು ನೋಡಬೇಕು ಎಂದರು.
ಪಿ.ವಿ.ಎಸ್.ಎಮ್, ಎ.ವಿ.ಎಸ್.ಎಮ್, ವಿ.ಎಸ್.ಎಮ್ (ನಿವೃತ್ತ) ಹಾಗೂ ನಾಸಿಕ್ ನ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಲೆಫ್ಟಿನೆಂಟ್ ಜನರಲ್ (ಡಾ) ಮಾಧುರಿ ಕಾನಿಟ್ಕರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಮಾಹೆ ಕುಲಪತಿ ಡಾ.ಎಚ್.ಎಸ್ ಬಲ್ಲಾಳ್, ಮಾಹೆ ಟ್ರಸ್ಟ್ ನ ಅಧ್ಯಕ್ಷ ಡಾ. ರಂಜನ್ ಆರ್ ಪೈ, ಉಪಕುಲಪತಿ ಎಂ.ಡಿ ವೆಂಕಟೇಶ್, ಸಹ-ಉಪಕುಲಪತಿ ವೆಂಕಟರಾಯ ಪ್ರಭು, ಡಾ.ದಿಲೀಪ್ ಜಿ ನಾಯ್ಕ್, ಡಾ ಪ್ರಜ್ಞಾ ರಾವ್, ರಿಜಿಸ್ಟ್ರಾರ್ ಡಾ ನಾರಾಯಣ ಸಭಾಹಿತ್ ಮತ್ತು ಡಾ ವಿನೋದ್ ವಿ ಥಾಮಸ್ ಉಪಸ್ಥಿತರಿದ್ದರು.
ಚಿನ್ನದ ಪದಕ ವಿಜೇತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.