ಪಡುಬಿದ್ರಿ: ಜನತೆಯ ಸಹಕಾರದೊಂದಿಗೆ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರವು ಅಗಾಧವಾಗಿ ಬೆಳೆದಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳ ಪೈಪೋಟಿಯ ನಡುವೆಯೂ ಸಮಾಜಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡುತ್ತ ರೈತರ ಆಶಯಗಳನ್ನು ಪೂರೈಸುತ್ತಿರುವ ಪಡುಬಿದ್ರಿ ವ್ಯಾವಸಾಯಿಕ ಸಹಕಾರಿ ಸೊಸೈಟಿಯು ಇಂದು ಬೃಹತ್ತಾಗಿ ಬೆಳೆದಿದೆ ಎಂದು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.
ಅವರು ಶನಿವಾರ ಪಡುಬಿದ್ರಿ ವ್ಯಾವಸಾಯಿಕ ಸೊಸೈಟಿಯ ಪಡುಬಿದ್ರಿ ಸಿಟಿ ಶಾಖೆಯ ನವೀಕೃತ ಹವಾನಿಯಂತ್ರಿತ ಕಟ್ಟಡ, ಕೃಷಿ ಉಪಕರಣಗಳ ಮಳಿಗೆಯ ಉದ್ಘಾಟನೆ ಮತ್ತು ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯದ ಅನಾವರಣಗಳ ಬಳಿಕ ಪ್ರಧಾನ ಕಚೇರಿಯಲ್ಲಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
120 ವರ್ಷಗಳ ಇತಿಹಾಸ
ಸಹಕಾರ ಕ್ಷೇತ್ರವು 120 ವರ್ಷಗಳ ಇತಿಹಾಸ ಹೊಂದಿದೆ. ಆದರೆ ಇದುವರೆಗೂ ಕೇಂದ್ರ ಸರಕಾರದ ಸಹಾಯಧನ, ಠೇವಣಿ ಲಭಿಸಿದ್ದು ಕೇವಲ 75 ವರ್ಷಗಳ ಇತಿಹಾಸ ಹೊಂದಿರುವ ವಾಣಿಜ್ಯ ಬ್ಯಾಂಕುಗಳಿಗೆ ಮಾತ್ರ. ಪ್ರಸ್ತುತ ಕೇಂದ್ರ ಸಹಕಾರ ಸಚಿವರಾಗಿರುವ ಅಮಿತ್ ಶಾ ಸಹಕಾರ ರಂಗದ ಬೆಳವಣಿಗೆಯನ್ನು ಗಮನಿಸಿದ್ದಾರೆ. ಪಡುಬಿದ್ರಿ ಸೊಸೈಟಿಯು ರೈತರಿಗೆ ಸಾಲ ನೀಡುತ್ತ ಪ್ರೋತ್ಸಾಹಿಸುತ್ತಿದೆ ಮತ್ತು ಶೇ. 96 ರಷ್ಟು ವಸೂಲಾತಿಯನ್ನು ಮಾಡುತ್ತಿದೆ. ಇಲ್ಲಿನ ಹವಾ ನಿಯಂತ್ರಿತ ಶಾಖೆಯ ನವೀಕರಣಕ್ಕೆ ಎಸ್ಸಿಡಿಸಿಸಿ ಬ್ಯಾಂಕ್ 5 ಲಕ್ಷ ರೂ. ದೇಣಿಗೆ ನೀಡಲಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಹಾಗೂ ಎಸ್ ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ಕೃಷಿ ಉಪಕರಣಗಳ ಮಾರಾಟ ಮಳಿಗೆಯನ್ನು ಉದ್ಘಾಟಿಸಿದರು. ಶಾಸಕ ಕೆ. ರಘುಪತಿ ಭಟ್ ಭತ್ತದ ಕೃಷಿಗೆ ಸಹಾಯಧನ ವಿತರಣೆಗೆ ಚಾಲನೆ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಚಿನ್ನಾಭರಣಗಳ ಪರಿಶುದ್ಧತೆ ಪರಿಶೀಲಿಸುವ ಯಂತ್ರವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಲೋಕಾರ್ಪಣೆಗೈಯಲಾಯಿತು.
ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ ರೈತರಿಗೆ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು, ಸಹಕಾರ ರತ್ನ ಜಿತ್ತರಂಜನ್ ಬೋಳಾರ ಇವರನ್ನು ಸನ್ಮಾನಿಸಲಾಯಿತು. ಸಂಘದ ನಿವೃತ್ತ ಪ್ರಬಂಧಕ ರವೀಂದ್ರ ರಾವ್ ಮತ್ತು ಪಲಿಮಾರು ಗ್ರಾ.ಪಂ.ನ ತ್ಯಾಜ್ಯ ವಿಲೇವಾರಿ ವಾಹನದ ಚಾಲಕ ಮಹೇಶ್ ಇವರನ್ನು ಅಭಿನಂದಿಸಲಾಯಿತು. ರೈತರು ಬೆಳೆದಿರುವ ಭತ್ತದ ಬೆಳೆಗಾಗಿ 220 ರೈತರನ್ನು ಗುರುತಿಸಿ ನಗದು ಪ್ರೋತ್ಸಾಹ ಧನ ವಿತರಿಸಲಾಯಿತು.
ಎಸ್ಸಿಡಿಸಿಸಿ ಬ್ಯಾಂಕಿನ ನಿರ್ದೇಶಕ ಡಾ.ದೇವಿ ಪ್ರಸಾದ್ ಶೆಟ್ಟಿ ಬೆಳಪು, ಪಡುಬಿದ್ರಿ ಗ್ರಾ.ಪಂ. ಅಧ್ಯಕ್ಷ ರವಿ ಶೆಟ್ಟಿ, ಪಾದೆಬೆಟ್ಟು, ಪಲಿಮಾರು ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ಪ್ರಭು, ತೆಂಕ ಗ್ರಾ.ಪ. ಅಧ್ಯಕ್ಷೆ ಕಸ್ತೂರಿ ಪ್ರವೀಣ್, ಹೆಜಮಾಡಿ ಗ್ರಾ.ಪ. ಉಪಾಧ್ಯಕ್ಷೆ ಪವಿತ್ರಾ ಗಿರೀಶ್ ಉಪಸ್ಥಿತರಿದ್ದರು.
ಪಡುಬಿದ್ರಿ ವ್ಯ.ಸ.ಸಂಘದ ಅಧ್ಯಕ್ಷ ವೈ. ಸುಧೀರ್ ಕುಮಾರ್ ಸ್ವಾಗತಿಸಿದರು. ಉಪಾಧ್ಯಕ್ಷ ಗುರುರಾಜ ಪೂಜಾರಿ ವಂದಿಸಿದರು. ಜಯ ಶೆಟ್ಟಿ ಪದ್ರ ನಿರೂಪಿಸಿದರು.