ಮಣಿಪಾಲ: ನಗರ ಭೂ ಸಾರಿಗೆ ನಿರ್ದೇಶನಾಲಯ ಅಡಿಯಲ್ಲಿ ನೋಂದಾಯಿತವಾಗಿರುವ ಕೆ.ಎನ್.ಎಮ್.ಟಿ.ಎ ಯು ಕರ್ನಾಟಕದ ಶ್ರೇಣಿ 2 ಮತ್ತು ಶ್ರೇಣಿ 3 ರ ನಗರಗಳಲ್ಲಿ ಬೀದಿ ನಡಿಗೆಗಳನ್ನು ಸುಧಾರಿಸಲು ತನ್ನ ಆಸಕ್ತಿಯನ್ನು ವ್ಯಕ್ತಪಡಿಸಿದೆ. ಬೀದಿಗಳ ವಿನ್ಯಾಸ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಮಾಜದ ಎಲ್ಲಾ ಪಾಲುದಾರರ ಸಹಯೋಗವನ್ನು ಕೆ.ಎನ್.ಎಮ್.ಟಿ.ಎ ಹೊಂದಿದೆ. ಈ ನಿಟ್ಟಿನಲ್ಲಿ, ಉಡುಪಿ ನಗರ ಪಾಲಿಕೆಯು, ಡಾ.ವಿ.ಎಸ್.ಆಚಾರ್ಯ ರಸ್ತೆಯ ವಿನ್ಯಾಸ ಅಭಿವೃದ್ಧಿ ಪಡಿಸಲು ಇಚ್ಛೆ ವ್ಯಕ್ತಪಡಿಸಿದೆ.
ಸಿಂಡಿಕೇಟ್ ವೃತ್ತದಿಂದ ಆರಂಭಗೊಂಡು ಜಿಲ್ಲಾಧಿಕಾರಿ ಕಚೇರಿವರೆಗೆ ಸರಿಸುಮಾರು 1.8 ಕಿಮೀ ಉದ್ದದ ರಸ್ತೆ ವಿನ್ಯಾಸವನ್ನು ಅಭಿವೃದ್ದಿಪಡಿಸಲಾಗುತ್ತದೆ. ಈ ಕಾರ್ಯಕ್ರಮದ ಅಂಗವಾಗಿ, ನಗರ ಭೂ ಸಾರಿಗೆ ನಿರ್ದೇಶನಾಲಯವು ಎಂಟು ವಾರಗಳ ಅವಧಿಗೆ ಮಾನ್ಸೂನ್ ಸ್ಟುಡಿಯೊವನ್ನು ತೆರೆದಿದೆ ಮತ್ತು ಮಣಿಪಾಲ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಅಂಡ್ ಪ್ಲಾನಿಂಗ್ ಜೊತೆ ಕೈ ಜೋಡಿಸಿದೆ.
ಆರ್ಕಿಟೆಕ್ಚರ್ ಸ್ನಾತಕೋತ್ತರ ಪದವಿಯ ಮೊದಲ ವರ್ಷದ ಅರ್ಬನ್ ಡಿಸೈನ್ ಮತ್ತು ಡೆವಲಪ್‌ಮೆಂಟ್‌ನ ವಿದ್ಯಾರ್ಥಿಗಳು ಹಾಗೂ ಇಬ್ಬರು ಅಧ್ಯಾಪಕ ಸಂಯೋಜಕರು, ಪ್ರೊ.ಟಿ.ಎನ್. ತ್ರಿವಿಕ್ರಮ್ ಮತ್ತು ಪ್ರೊ. ಅಕ್ಷತಾ ರಾವ್ ಈ ಸ್ಟುಡಿಯೋದಲ್ಲಿ ಭಾಗವಹಿಸಿದ್ದರು. ಮೊದಲ ಮೂರು ವಾರ ವಿದ್ಯಾರ್ಥಿಗಳು ಬೀದಿಗಳಲ್ಲಿ ಮಾಡಬೇಕಾಗಿರುವ ಚಟುವಟಿಕೆಗಳ ಅಧ್ಯಯನ ಮತ್ತು ದಾಖಲಾತಿಯನ್ನು ಮಾಡಿದರು.
ನಗರಸಭೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮೋಹನ್ ರಾಜು ಜೊತೆ ನಗರ ಭೂ ಸಾರಿಗೆ ನಿರ್ದೇಶನಾಲಯದ ತಜ್ಞರು ಸ್ಥಳ ನಿರೀಕ್ಷಣೆ ಮಾಡಿದರು.
ಮಾನ್ಸೂನ್ ಸ್ಟೂಡಿಯೋದ ಭಾಗವಾಗಿ ನಿರ್ದೇಶನಾಲಯದ ಕೇಂದ್ರ ಕಚೇರಿಯಲ್ಲಿ ಎರಡು ದಿನಗಳ ಕಾರ್ಯಾಗಾರವನ್ನು ಅ.14 ಮತ್ತು ಅ.15 ರಂದು ಹಮ್ಮಿಕೊಳ್ಳಲಾಗಿತ್ತು. ವಿದ್ಯಾರ್ಥಿಗಳು ರಸ್ತೆಯಲ್ಲಿ ನಡೆಸಿದ ಅಧ್ಯಯನದ ಆರಂಭಿಕ ಅಚ್ಚನ್ನು ಮಾಡಿದರು ತದನಂತರ ಪರಿಕಲ್ಪನಾ ವಿನ್ಯಾಸವನ್ನು ಪ್ರಸ್ತುತಪಡಿಸಿದರು. ಈ ಪರಿಕಲ್ಪನಾ ವಿನ್ಯಾಸವನ್ನು ನಿರ್ದೇಶನಾಲಯದ ಆಯುಕ್ತೆ ಮಂಜುಳಾ ಐ.ಎ.ಎಸ್ ಮತ್ತು ಇತರ ತಜ್ಞ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಎರಡು ದಿನದ ಕಾರ್ಯಾಗಾರವು ಸಂಭವನೀಯ ವಿನ್ಯಾಸದ ಮಧ್ಯಸ್ಥಿಕೆಗಳ ಬಗ್ಗೆ ಯೋಚಿಸಲು ಸಹಾಯಕವಾಗಿದೆ. ವಿನ್ಯಾಸಗಳನ್ನು ಹೆಚ್ಚಿನ ಸುಧಾರಣೆಗಾಗಿ ಪರಿಷ್ಕರಿಸಲಾಗುತ್ತಿದೆ.












