ವಿದೇಶ ಬಿಟ್ಟು ಊರಿಗೆ ಬಂದ ಯುವಕ, ಈಗ ಗೋಪಾಲಕ: ದೇಶಿ ಹೈನುಗಾರಿಕೆಯ ಕೈ ಹಿಡಿದ ಈ ಯುವಕನ ಕತೆ ಕೇಳಿ

ದೇಶಿ ದನಗಳ ಹಾಲಿನ ಮಹತ್ವ ಕಂಡುಕೊಂಡು, ದೇಶಿ ಗೋವುಗಳ ಹಾಲನ್ನು ಹುಡುಕಿ ಹೋಗುವವರು ಬಹಳಷ್ಟು ಜನ ಇದ್ದಾರೆ, ಆದರೆ  ಜನರ ಬೇಡಿಕೆಗನುಗುಣವಾಗಿಯೇ ಅಪರೂಪದ ದೇಶಿ ದನಗಳನ್ನು ಸಾಕಿ, ಹೈನುಗಾರಿಕೆಯನ್ನು  ನೆಚ್ಚಿಕೊಳ್ಳುವವರು ಬಹಳ ಅಪರೂಪ. ಆ ಅಪರೂಪದ ವ್ಯಕ್ತಿಗಳ ಪೈಕಿ ನಮ್ಮ ಜಿಲ್ಲೆಯಲ್ಲಿ ಕೇಳಿ ಬರುತ್ತಿರುವ ಯುವಕ ಹೈನ್ಯೋದ್ಯಮಿಯ  ಹೆಸರು  ನಿಶಾನ್ ಡಿ’ಸೋಜ.  ವಿದೇಶದಲ್ಲಿ ಒಂದಷ್ಟು ಉದ್ಯೋಗ ಮಾಡಿ, ಇದೀಗ ಸ್ವಂತ ಊರಿನಲ್ಲೇ ಹೈನುಗಾರಿಕೆಯನ್ನು ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ  ನಿಶಾನ್ ಅನ್ನೋ ಬ್ರಹ್ಮಾವರದ ಯುವಕ, ಪಡುನೀಲಾವರದ ಬಾಯರ್ ಬೆಟ್ಟಿನಲ್ಲಿ ದೇಶೀಯ ಗೋವು ಸಾಕಾಣಿಕೆ ಕೇಂದ್ರ ಪ್ರಾರಂಭಿಸಿ ಹೈನುಗಾರಿಕೆಯಲ್ಲಿ ಸೈ ಅನ್ನಿಸಿಕೊಂಡಿದ್ದಾರೆ.

ದೇಶಿ ತಳಿ ದನಗಳ ಜೊತೆ ಬದುಕು ಪಾವನ:

ಸರಿ ಸುಮಾರು ಒಂದು ವರ್ಷದ ಹಿಂದೆ ಪ್ರಾರಂಭಿಸಲಾದ ದೇಶಿ ತಳಿಗಳ ಕೇಂದ್ರ ಎನ್.ಎನ್. ಫಾರ್ಮ್ ನಿಶಾನ್ ರ ಕನಸು. ಇಲ್ಲಿ ಸುಮಾರು 32 ದನಗಳು, 14 ಕರುಗಳಿವೆ. ಗುಜರಾತ್‍ನ ಗಿರ್, ಪಂಜಾಬ್‍ನ ಸಾಹಿವಾಲ್, ರಾಜಸ್ಥಾನದ ರಾಟಿ, ಭಾರತ ಪಾಕಿಸ್ಥಾನ ಗಡಿ ಪ್ರದೇಶದ ರೆಡ್‍ಸಿಂಧಿ ,  ಮಲೆನಾಡು ಗಿಡ್ಡ ಸೇರಿದಂತೆ ಸಂಪೂರ್ಣ ದೇಶೀ ತಳಿಯ ಹಸುಗಳನ್ನು ಇವರು ಆರೈಕೆ ಮಾಡುತ್ತಿದ್ದಾರೆ.

ಹೈನುಗಾರಿಕೆಯೇ ಕನಸು:

ನಿಶಾನ್,  ನಿಟ್ಟೆಯಲ್ಲಿ ಹೊಟೇಲ್ ಮೆನೇಜ್ ಮೆಂಟ್ ಪದವಿ ಪಡೆದು ಬೆಂಗಳೂರು ಹಾಗೂ ಅಮೇರಿಕಾದಲ್ಲಿ 6 ವರ್ಷ ಉದ್ಯೋಗದಲ್ಲಿದ್ದರು. ಆದರೆ ಹೈನುಗಾರಿಕೆಯತ್ತ ಅವರಿಗಿರುವ ಸೆಳೆತ ಹಾಗೂ ದೇಶೀಯ ಗೋವುಗಳ ಸಾಕಾಣಿಕೆಯ ಆಸಕ್ತಿ, ಮೂಲ ಮನೆ ಪಡುನೀಲಾವರದಲ್ಲಿ ಎನ್.ಎನ್.ಫಾರ್ಮ್  ಪ್ರಾರಂಭಿಸುವಂತೆ ಮಾಡಿತು. ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ಕೊಟ್ಟು ದೇಶಿ ಗೋವು ಸಾಕಣಿಕೆ ಬಗ್ಗೆ ಇವರು ಮಾಹಿತಿ ಪಡೆದುಕೊಂಡು, ಗೋವುಗಳನ್ನು ಖರೀದಿಸಿದರು.

ರಾಸಾಯನಿಕದಿಂದ ದೂರ:

” ಸಾಮಾನ್ಯವಾಗಿ  ಆಧುನಿಕ ತಳಿಗಳ ಹಸುಗಳಿಗೆ ನೀಡುವ ಆಹಾರವೂ ರಾಸಾಯನಿಕವಾಗಿರುವುದರಿಂದ  ಅವುಗಳು ಕೊಡುವ ಹಾಲು ಕೂಡ ಆರೋಗ್ಯಕ್ಕೆ ಹಿತಕಾರಿಯಲ್ಲ. ಅಲ್ಲದೇ  ಸಂತಾನೋತ್ಪತ್ತಿಗಾಗಿ  ಆಧುನಿಕ ದನಗಳಿಗೆ ನೀಡುವ ಇಂಜೆಕ್ಷನ್ ಕೂಡ ಅಪಾಯಕಾರಿ. ಆದರೆ ಈ ದೇಶಿ ದನಗಳಿಗೆ ಹಾಗಲ್ಲ. ಬೇರೆ ಬೇರೆ ಧಾನ್ಯಗಳನ್ನು ಬಳಸಿ ತಾವೇ ತಯಾರಿಸಿದ ಆಹಾರವನ್ನು ನೀಡಬೇಕು. ಗೋವುಗಳಿಗಾಗಿ  ತೋಟದಲ್ಲಿ ಹಸಿ ಹುಲ್ಲು ಬೆಳೆಸಿದ್ದೇನೆ, ದೇಶೀ ತಳಿಯ ಹೋರಿಯನ್ನು ಸಾಕಿದ್ದೇನೆ. ಹಸುಗಳನ್ನು ಬಿಸಿಲಿಗೆ ಬಿಟ್ಟಾಗ, ಭುಜದಲ್ಲಿರುವ ಸೂರ್ಯಕೇತು ನಾಡಿಗೆ ಬಿದ್ದ ಬಿಸಿಲು ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ಜಾಸ್ತಿಯಾಗುತ್ತದೆ ಎನ್ನುವುದು ನಿಶಾನ್ ಮಾತು.

ಕಷ್ಟವಾದರೂ ದೇಶಿ ಗೋವು ಸಾಕಣೆಯೇ ಇಷ್ಟ:

ಅಂದ ಹಾಗೆ ದೇಶಿ ತಳಿಗಳ ಹಸು ಸಾಕಾಣಿಕೆ ಅಷ್ಟು ಸುಲಭವಲ್ಲ. ಹಸುಗಳಿಗೆ 70ರಿಂದ 80,000 ರೂ. ಮೌಲ್ಯವಿದೆ. ಆದರೆ ಇದು ಗರಿಷ್ಠ 8 ಲೀ. ಹಾಲನ್ನು ಮಾತ್ರ ನೀಡುತ್ತವೆ. ಜತೆಗೆ ಸಾಕಾಣಿಕೆ, ನಿರ್ವಹಣೆ ಖರ್ಚು. ಆದರೆ ಹಾಲು ಉತ್ಕೃಷ್ಟ  ಗುಣಮಟ್ಟವನ್ನು ಹೊಂದಿದೆ.  ಪ್ರಸ್ತುತ ಉಡುಪಿ, ಮಣಿಪಾಲದಲ್ಲಿ ಸೇರಿದಂತೆ ವಿವಿದೆಡೆ ಸುಮಾರು 40 ಗ್ರಾಹಕರಿದ್ದಾರೆ.  ಈಗೀಗ ಜನರಲ್ಲಿ ಆರೋಗ್ಯ ಜಾಗೃತಿಯೂ, ಹೆಚ್ಚುತ್ತಿರುವುದರಿಂದ  ಉತ್ತಮ ಬೇಡಿಕೆ ಬರುತ್ತಿದೆ ಎನ್ನುತ್ತಾರೆ ನಿಶಾನ್ 

ದೇಶಿ ಹಾಲಿನ ಮಹತ್ವ ಗೊತ್ತಾ?

ದೇಶೀಯ ತಳಿಗಳ ಹಾಲು ಅತ್ಯಂತ ಉತ್ಕೃಷ್ಟ  ಗುಣಮಟ್ಟವನ್ನು ಹೊಂದಿದೆ.  ಈ ಹಾಲು ರೋಗ ನಿರೋಧಕ ಶಕ್ತಿಯನ್ನು  ಹೆಚ್ಚಿಸುತ್ತದೆ. ಜೆರ್ಸಿ ದನಗಳ ಹಾಲಿನಲ್ಲಿ ದೇಹಕ್ಕೆ ಹಾನಿಕಾರಕವಾದ ಬಿಸಿಎಂ7 ಉತ್ಪತ್ತಿಯಾದರೆ, ದೇಶೀ ತಳಿಗಳಲ್ಲಿ ಆರೋಗ್ಯಕರವಾದ ಎ2 ಪ್ರೋಟೀನ್  ಮಾತ್ರ ಉತ್ಪತ್ತಿಯಾಗುತ್ತದೆ. ಸಾಧ್ಯವಾದಷ್ಟು  ಜನರಿಗೆ ಆರೋಗ್ಯಕರವಾದ ದೇಶಿ ತಳಿಗಳ ಹಾಲನ್ನು ನೀಡಬೇಕೆನ್ನುವ ಉದ್ದೇಶದಿಂದ ನಿಶಾನ್  ಅವರು ಸಂಸ್ಥೆ ಆರಂಭಿಸಿದ್ದಾರೆ.

 ಕೋಟ ಹಾಗೂ ಎಳ್ಳಂಪಳ್ಳಿಯಲ್ಲಿ  ಈಚೆಗೆ ನಡೆದ ಜಾನುವಾರು ಪ್ರದರ್ಶನದಲ್ಲಿ ಇವರ ಗೋವುಗಳಿಗೆ  ಬಹುಮಾನ ಲಭಿಸಿದೆ. ಸರಕಾರ, ದೇಶಿ ತಳಿಯ ಗೋವುಗಳಿಗೆ ಹಾಗೂ ಹಾಲು ಪೂರೈಕೆಗೆ  ಪ್ರೋತ್ಸಾಹ ನೀಡಿದರೆ  ದೇಶಿ ಸಂಸ್ಕೃತಿಯ ಜೊತೆಗೆ, ಯುವ ಸಮುದಾಯವನ್ನೂ ಬೆಳೆಸಬಹುದು.

ವಿದೇಶ ಬಿಟ್ಟು ತಮ್ಮೂರಿಗೆ ಮರಳಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡ ನಿಶಾನ್ ಅವರ ಬದುಕು ಯುವಕರಿಗೆ, ಹೈನುಗಾರಿಕೆಯಲ್ಲಿ ಬದುಕು ಕಳೆಯಬೇಕು ಎನ್ನುವವರಿಗೆ ಮಾದರಿ.

ನಿಶಾನ್ ಡಿ’ಸೋಜಾ ಅವರ ಸಂಪರ್ಕ: 9902197791