ನವಭಾರತಕ್ಕಾಗಿ ಫಕೀರನ ಜೋಳಿಗೆ ತುಂಬಿಸಿದ್ದಾರೆ ದೇಶದ ಜನತೆ.. ದೇಶದ ಜನತೆಗೆ ಮೋದಿ ಅಭಿನಂದನೆ

ನವದೆಹಲಿ: ನವಭಾರತಕ್ಕಾಗಿ ದೇಶದ ಕೋಟಿ ಕೋಟಿ ನಾಗರಿಕರು ಫಕೀರನ ‌ಜೋಳಿಗೆಯನ್ನು ಈ ಜನತೆ ತುಂಬಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅತೀ ಹೆಚ್ಚಿನ ‌ಮತದಾನವಾಗಿದೆ.‌ ಈ ಗೆಲುವನ್ನು ಜನತಾ ಜನಾರ್ದನನ ಪಾದಗಳಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ‌ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಮೋದಿ ಅವರು, ಭಾಷಣ ಪ್ರಾರಂಭಿಸುತ್ತಲೇ ಬಿಜೆಪಿ  ರಾಷ್ಟ್ರೀಯ ಅಧ್ಯಕ್ಷ, ಹಿರಿಯ ನಾಯಕರು ಹಾಗೂ ದೇಶದ ಕೋಟಿ ಕೋಟಿ‌ ಕಾರ್ಯಕರ್ತರಿಗೆ, ಎಲ್ಲ ಜಯಗಳಿಸಿದ ಅಭ್ಯರ್ಥಿಗಳಿಗೆ ಮೋದಿ ಅಭಿನಂದನೆ ಸಲ್ಲಿಸಿದರು.
ನಮ್ಮ ದೇಶದ ಪ್ರಜಾಪ್ರಭುತ್ವ ಇಡೀ ವಿಶ್ವಕ್ಕೆ ಮಾದರಿಯಾಗಿದೆ. ಈ ಗೆಲುವು ಕೇವಲ‌ ಮೋದಿ ಗೆಲುವಲ್ಲ. ದೇಶದ ರೈತರು, ಅಸಂಘಟಿತ ಕಾರ್ಮಿಕರ, ಕಾನೂನು‌ ಪಾಲಿಸುವ ದೇಶದ ತೆರಿಗೆದಾರರ ಗೆಲುವು. ಪ್ರತಿಯೊಬ್ಬರ ಭಾವನೆಯು ಒಂದೇ ಆಗಿತ್ತು. ದೇಶದಲ್ಲಿ‌ ಬಡತನದ ನಿರ್ಮೂಲನೆ ಆಗಬೇಕಿದೆ ಎಂದವರು ಹೇಳಿದರು.
ಅಭಿವೃದ್ಧಿ ಕುರಿತು ಮಾತನಾಡಿದ ಮೋದಿ ಪ್ರತೀ ರಾಜ್ಯಗಳ ಅಭಿವೃದ್ಧಿಗೆ ಕ್ರಮಕೈಗೊಳ್ಳಲಾಗುವುದು. ಕಳೆದ 5 ವರ್ಷದ ಅವಧಿಯಲ್ಲಿ ಒಂದು ಭ್ರಷ್ಟಾಚಾರದ ಆರೋಪ ಬಿಜೆಪಿ ಆಡಳಿತದಲ್ಲಿ‌ ಇಲ್ಲ ಎಂದರು.
ಚುನಾವಣಾ ಸಂದರ್ಭದಲ್ಲಿ ಪ್ರತಿ ಪಕ್ಷಗಳು ಸಾಕಷ್ಟು ಟೀಕೆ, ಆರೋಪಗಳನ್ನು ಮಾಡಿವೆ. ಆದರೆ ಅದರ ಚರ್ಚೆ ಬೇಡ. ಮುಂದಿನ ದಿನಗಳಲ್ಲಿ ದೇಶದ ಅಭಿವೃದ್ಧಿಗೆ‌ ಎಲ್ಲರೂ ಕೈಜೋಡಿಸೋಣ ಎಂದರು.
ಇದಕ್ಕೂ ಮೊದಲು ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ದೇಶದ ಜನತೆಗೆ ಧನ್ಯವಾದ ಸಲ್ಲಿಸಿದರು.