ಉಡುಪಿ: ಹೊಸ ವರ್ಷಾಚರಣೆಗೆ ಕಡ್ಡಾಯ ನಿಯಮ; ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿ

ಉಡುಪಿ: ಇನ್ನೇನು 2022 ಕ್ಕೆ ವಿದಾಯ ಹೇಳಲಿದ್ದು, 2023 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಬೇಕೆಂದಿದ್ದ ಜನರಿಗೆ ಕೋವಿಡ್ ಮತ್ತೊಮ್ಮೆ ಆಘಾತವನ್ನುಂಟು ಮಾಡಿದೆ. ಜಗತ್ತಿನಾದ್ಯಂತ ಕೋವಿಡ್ ಬಗ್ಗೆ ಹೆಚ್ಚಿರುವ ಆತಂಕದಿಂದಾಗಿ ಭಾರತದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ವರ್ಷಾಚರಣೆಯ ಸಂಭ್ರಮಗಳನ್ನು ಜನವರಿ ಮಧ್ಯರಾತ್ರಿ 1 ಗಂಟೆಯೊಳಗೆ ಮುಕ್ತಾಯಗೊಳಿಸುವಂತೆ ರಾಜ್ಯ ಸರ್ಕಾರವು ಈಗಾಗಲೇ ಸೂಚನೆ ನೀಡಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿಯೂ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿಗಳು:

  • ಹೊಸ ವರ್ಷದ ಸಂಭ್ರಮಾಚರಣೆಗಳನ್ನು ಜನವರಿ 1 ರ ಮಧ್ಯರಾತ್ರಿಯೊಳಗೆ ಮುಕ್ತಾಯಗೊಳಿಸಬೇಕು.
  • ಪಬ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಅಥವಾ ಒಳಾಂಗಣಗಳಲ್ಲಿ ಅದರ ಸಾಮರ್ಥ್ಯಕ್ಕೆ ಮೀರಿ ಜನರಿಗೆ ಅವಕಾಶ ನೀಡಬಾರದು.
  • ಕಾರ್ಯಕ್ರಮದ ಸ್ಥಳಗಳಲ್ಲಿ ವಿದ್ಯುತ್ ಅವಘಡಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು.
  • ಸಾರ್ವಜನಿಕ ಸಮಾರಂಭಗಳನ್ನು ಆಯೋಜಿಸುವ ಆಯೋಜಕರು ಪೊಲೀಸ್ ಠಾಣೆಗೆ ಕಡ್ಡಾಯ ಮಾಹಿತಿ ನೀಡತಕ್ಕದ್ದು.
  • ಕಾರ್ಯಕ್ರಮಗಳ ಆಯೋಜಕರು ಭದ್ರತೆ ಮತ್ತು ವ್ಯವಸ್ಥೆಗಾಗಿ ಪುರುಷ ಮತ್ತು ಮಹಿಳಾ ಸಿಬ್ಬಂದಿ ಹಾಗೂ ಸ್ವಯಂ ಸೇವಕರನ್ನು ನೇಮಿಸಬೇಕು.
  • ಪಾರ್ಕಿಂಗ್ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
  • ಬಸ್ ನಿಲ್ದಾಣ, ಬೀಚ್, ರಸ್ತೆ, ಕಾಲುದಾರಿ, ಸಾರ್ವಜನಿಕ ಉದ್ಯಾನವನ ಸೇರಿದಂತೆ ಇನ್ನಿತರ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಹೊಸ ವರ್ಷಾಚರಣೆಗಳನ್ನು ನಡೆಸುವಂತಿಲ್ಲ.
  • ಅಮಲು ಪದಾರ್ಥ ಅಥವಾ ಮದ್ಯ ಸೇವಿಸಿ ಆಚರಣೆ ನಡೆಸುವಂತಿಲ್ಲ. ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು.

    ಹೊಸ ವರ್ಷಾಚರಣೆಯ ನೆಪದಲ್ಲಿ ಮಹಿಳೆ ಜೊತೆ ಅನುಚಿತವಾಗಿ ವರ್ತಿಸಿದಲ್ಲಿ ಅಂತಹವರ ವಿರಿದ್ದ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸಲಾಗುವುದು.

  • ಸರ್ವೋಚ್ಛ ನ್ಯಾಯಾಲಯದ ಆದೇಶಕ್ಕನುಗುಣವಾಗಿ ಲೌಡ್ ಸ್ಪೀಕರ್ ಗಳನ್ನು ಬಳಸತಕ್ಕದ್ದು, ಮತ್ತು ವಿದ್ಯಾರ್ಥಿಗಳು, ಹಿರಿಯ ನಾಗರಿಕರು, ಆನಾರೋಗ್ಯ ಪೀಡಿತರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
  • ಕುಡಿತದ ಅಮಲಿನಲ್ಲಿ ವಾಹನ ಚಾಲನೆ, ನಿರ್ಲಕ್ಷ್ಯ ಮತ್ತು ಅತಿವೇಗದ ವಾಹನ ಚಾಲನೆ ಕಂಡುಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು.

ಡಿ.31 ರಿಂದ ಜನವರಿ 1 ಮಧ್ಯರಾತ್ರಿವರೆಗೆ ಸೂಚಿಸಲಾದ ಎಲ್ಲ ನಿಯಮಗಳನ್ನು ಸಾರ್ವಜನಿಕರು, ಕಾರ್ಯಕ್ರಮಗಳ ಆಯೋಜಕರು ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆಯು ಸೂಚನೆ ನೀಡಿದೆ.