ಉಡುಪಿ: ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಭಾಗದ ಜನರ ಬಹುದಿನದ ಬೇಡಿಕೆಯನ್ನು ರೈಲ್ವೆ ಇಲಾಖೆ ಈಡೇರಿಸಿದೆ. ಈ ಕೆಳಗಿನ ರೈಲುಗಳ ನಿಲುಗಡೆಗೆ ಬಹುದಿನಗಳಿಂದ ಜನರ ಬೇಡಿಕೆಯಿದ್ದು ಈ ಕುರಿತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರದ ರೈಲ್ವೆ ಸಚಿವರಿಗೆ ಪತ್ರ ಬರೆದು ಸಭೆ ನಡೆಸಿ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಈ ಕೆಳಗಿನ ರೈಲುಗಳಿಗೆ ಕೆಳಕಂಡ ರೈಲು ನಿಲ್ದಾಣಗಳಲ್ಲಿ ನಿಲುಗಡೆ ನೀಡಿ ಆದೇಶವನ್ನು ಹೊರಡಿಸಿದ್ದಾರೆ.
1. ಕುಂದಾಪುರದಲ್ಲಿ ನೇತ್ರಾವತಿ ಎಕ್ಸಪ್ರೆಸ್ (Train 13645/46) ನಿಲುಗಡೆ ಬಗ್ಗೆ ಸಾರ್ವಜನಿಕರಿಂದ ಬಹಳ ಒತ್ತಾಯವಿತ್ತು, ಈ ಬಗ್ಗೆ ಕುಂದಾಪುರದ ರೈಲ್ವೆ ಹೋರಾಟ ಸಮಿತಿ ಮತ್ತು ಸಾರ್ವಜನಿಕರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿ ಮನವಿ ಮಾಡಿ ಒತ್ತಾಯಿಸಿದ್ದರು. ಕರೋನಾ ಸಮಯದಲ್ಲಿ ತಿರುವನಂತಪುರ ಮುಂಬಯಿ ಎಕ್ಸಪ್ರೆಸ್ಗೆ (ನೇತ್ರಾವತಿ ಎಕ್ಸಪ್ರೆಸ್) ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದಾಗಿತ್ತು. ತದನಂತರ ನಿಲುಗಡೆ ಪ್ರಾರಂಭವಾಗದೆ ಕುಂದಾಪುರದಿಂದ ಮುಂಬಯಿ ಮತ್ತು ಗೋವಾಕ್ಕೆ ತೆರಳುವ ಮತ್ತು ಮುಂಬಯಿ ಮತ್ತು ಗೋವಾದಿಂದ ಕುಂದಾಪುರಕ್ಕೆ ಸಂಚರಿಸುವ ಹಲವಾರು ಪ್ರಯಾಣಿಕರಿಗೆ ತೊಂದರೆಯಾಗಿತ್ತು. ಪ್ರಯಾಣಿಕರ ಸಮಸ್ಯೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಪರಿಹರಿಸಿದ್ದು, ನೇತ್ರಾವತಿ ಎಕ್ಷಪ್ರೆಸ್ಗೆ ಕುಂದಾಪುರದಲ್ಲಿ ನಿಲುಗಡೆಗೆ ನೀಡಿ ಕೇಂದ್ರ ರೈಲ್ವೆ ಸಚಿವಾಲಯ ಆದೇಶಿಸಿದೆ.
2. ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಸಪ್ರೆಸ್ಗೆ (17309/10) ಕಡೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲು, ಚಿಕ್ಕಮಗಳೂರ ಮತ್ತು ಕಡೂರಿನ ಭಾಗದ ಪ್ರಯಾಣಿಕರು ಸಂಸದೆ ಹಾಗೂ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಲ್ಲಿ ಒತ್ತಾಯ ಮಾಡಿದ್ದರು. ಬೆಂಗಳೂರಿನಿಂದ ಗೋವಾಕ್ಕೆ /ಗೋವಾದಿಂದ ಬೆಂಗಳೂರಿಗೆ ತೆರಳುವ ಈ ರೈಲಿಗೆ ಕಡೂರಿನಲ್ಲಿ ನಿಲುಗಡೆ ನೀಡುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಕೇಂದ್ರದ ರೇಲ್ವೆ ಸಚಿವರಿಗೆ ಮನವರಿಕೆ ಮಾಡಿದ್ದರು. ಈ ಭಾಗದ ಜನರ ಸಮಸ್ಯೆಗೆ ಸ್ಪಂದಿಸಿದ ಕೇಂದ್ರದ ರೈಲ್ವೆ ಸಚಿವರು ರೈಲು ಸಂಖ್ಯೆ 17309/10 (ಯಶವಂತಪುರ- ವಾಸ್ಕೋ-ಡಾ-ಗಾಮಾ ಎಕ್ಪಪೆಸ್)ಗೆ ಕಡೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದ್ದಾರೆ.
3. ಮಂಗಳೂರಿನಿಂದ ಮುಂಬೈ/ಮುಂಬೈನಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ – ಮಂಗಳೂರು ಮಸ್ತ್ಯಗಂಧ ಎಕ್ಸಪ್ರೆಸ್ಗೆ (12616/20) ಉಡುಪಿ ಜಿಲ್ಲೆಯ ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ನೀಡುವ ಬಗ್ಗೆಯೂ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ಸ್ಯಗಂಧ ರೈಲು ಬಾರ್ಕೂರು ನಿಲುಗಡೆಗೊಳ್ಳವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಹೋಟೆಲ್ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ನಿಲುಗಡೆ ಬಹಳ ಉಪಯುಕ್ತವಾಗಲಿವೆ. ಇವೆಲ್ಲವನ್ನು ಪರಿಗಣಿಸಿ ರೈಲ್ವೆ ಇಲಾಖೆ ಬಾರ್ಕೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಅನುಮತಿಯನ್ನು ಹೊರಡಿಸಿದೆ.
4. ಬೆಂಗಳೂರಿನಿಂದ ರಾಜಸ್ಥಾನದ ಬಾರ್ಮರ್ ಸಂಪರ್ಕಕೊಂಡಿಯಾಗಿದ್ದ ಯಶವಂತಪುರ-ಬಾರ್ಮೆರ್ ರೈಲು ಗಾಡಿಗೆ (04806/05) ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿಲುಗಡೆ ಇಲ್ಲದ ಕಾರಣ ಅನಾನುಕೂಲತೆಯಾಗಿತ್ತು. ಈ ರೈಲು ಗಾಡಿಗೆ ಬಿರೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳಿಸಲು ಸ್ಥಳೀಯ ಶಾಸಕರು, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರು ರೈಲ್ವೆ ಸಚಿವರಲ್ಲಿ ಮನವಿ ಮಾಡಿದ್ದರು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರು ಸದರಿ ರೈಲಿಗೆ ಬಿರೂರು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಆದೇಶಿಸಿದ್ದಾರೆ. ಈ ಹಿಂದೆ ರೈಲುಗಾಡಿಗೆ ತುಮಕೂರು, ಅರಸಿಕೇರೆ ಮತ್ತು ದಾವಣೆಗೆರೆ ರೈಲ್ವೆ ನಿಲ್ದಾಣದಲ್ಲಿ ಮಾತ್ರ ನಿಲುಗಡೆಗೆ ಆದೇಶವಿದ್ದು, ಈಗ ಮಲೆನಾಡಿನ ಹೆಬ್ಬಾಗಿಲು ಬೀರೂರು ನಿಲ್ಲಾಣದಲ್ಲಿ ಈ ರೈಲು ನಿಲ್ಲಲಿದೆ. ಚಿಕ್ಕಮಗಳೂರಿಗೆ ರಾಜಸ್ಥಾನದಿಂದ ಕಾರ್ಮಿಕರು ಹಾಗೂ ಉದ್ಯಮಿಗಳು ಆಗಮಿಸುತ್ತಿದ್ದು, ಉತ್ತರಭಾರತದಿಂದ ಚಿಕ್ಕಮಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ ಹಾಗೂ ವ್ಯಾಪಾರೋದ್ಯಮಕ್ಕೆ ಬಹಳ ಅನುಕೂಲವಾಗಲಿದೆಯೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲೆಯ ಸಾರ್ವಜನಿಕರ ಬೇಡಿಕೆಯನ್ನು ಈಡೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ರೇಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಕ್ಷೇತ್ರದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.