ಉಡುಪಿ, ಜುಲೈ 26: ಡೆಂಗ್ಯೂ ನಿರ್ಮೂಲನೆಗೆ ಎಲ್ಲರೂ ಸ್ವ ಪ್ರೇರಣೆಯಿಂದ ಮುಂದೆ ಬಂದು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದರು.
ಅವರು ಶುಕ್ರವಾರ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ ಉಡುಪಿ, ಲಯನ್ಸ್ ಕ್ಷಬ್ ಬ್ರಹ್ಮಗಿರಿ ಉಡುಪಿ, ಪೂರ್ಣಪ್ರಜ್ಞ ಪದವಿ ಕಾಲೇಜು ಉಡುಪಿ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಗಿರಿಯ ಲಯನ್ಸ್ ಕ್ಷಬ್ನಲ್ಲಿ ನಡೆದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಡೆಂಗ್ಯೂ ವಿರುದ್ಧ ಜಾಗೃತಿ ಮೂಡಿಸುವಂತಹ ಕೆಲಸಗಳನ್ನು ಮಾಡುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ತಾಲೂಕಿನ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ಸಂಘ, ಸಂಸ್ಥೆಗಳು, ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಿ, ಡೆಂಗ್ಯೂವನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂದು ಕರೆ ಕೊಟ್ಟರು.
ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ವಿರೋಧಿ ಕಾರ್ಯಕ್ರಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ವೈದ್ಯ-ವಿಜ್ಞಾನದ ಆವಿಷ್ಕಾರದಿಂದ ಭೀಕರ ಕಾಯಿಲೆಗಳ ಮೇಲೆ ವಿಜಯ ಸಾಧಿಸಿದ್ದೇವೆ. ಆದರೂ ಪರಿಸರ ಮಾಲಿನ್ಯದಿಂದ ಹೊಸ ಹೊಸ ರೋಗಗಳು ಹುಟ್ಟಿಕೊಳ್ಳುತ್ತಿದೆ. ಜನನಿಬಿಡ ಪ್ರದೇಶಗಳಲ್ಲಿ ಇಂತಹ ಸಮಸ್ಯೆ ವಿರುದ್ಧ ಜನರು ಸಾಮೂಹಿಕವಾಗಿ ಸ್ಪಂದಿಸಬೇಕು, ಜನ ಸಾಮಾನ್ಯರು ಉದಾಸೀನ ತೋರದೆ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಜೊತೆ ಸೇರಿ ಸ್ವಚ್ಚತಾ ಕಾರ್ಯದಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಮಾತನಾಡಿ, ಜನರಲ್ಲಿ ಡೆಂಗ್ಯೂ ಕುರಿತು ಜಾಗೃತಿ ಮೂಡಿಸಲು ಪ್ರತೀ ವರ್ಷವೂ ಡೆಂಗ್ಯೂ ವಿರೋಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ. ಡೆಂಗ್ಯೂ ನಿರ್ಮೂಲನೆಗೆ ಜಿಲ್ಲಾಡಳಿತ ಅಥವಾ ಇಲಾಖೆ ವತಿಯಿಂದ ಏನೆಲ್ಲಾ ಸಹಾಯಬೇಕು ಅದನ್ನು ಒದಗಿಸಲು ಸಿದ್ಧ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶೋಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಡೆಂಗ್ಯೂ ನಿರ್ಮೂಲನೆಗಾಗಿ ಸಾರ್ವಜನಿಕರು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಬೇಕು. ಡೆಂಗ್ಯೂವಿನಂತಹ ಮಾರಣಾಂತಿಕ ರೋಗದಿಂದ ಮುಂದಿನ ದಿನಗಳಲ್ಲಿ ನಾಗರಿಕರ ಜೀವ ಹಾನಿಯಾಗಬಾರದು, ಈ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಕೈಗೊಳ್ಳಬೇಕು ಎಂದರು.
ಲಯನ್ಸ್ ಕ್ಲಬ್ ಉಡುಪಿ ಘಟಕದ ಕಾರ್ಯದರ್ಶಿ ಲಯನ್.ರವಿರಾಜ್ ಮಾತನಾಡಿ, ಸ್ವಚ್ಚತೆ ಬಗ್ಗೆ ಎಲ್ಲರೂ ಹೆಚ್ಚಿನ ಗಮನ ವಹಿಸಬೇಕಾಗಿದೆ. ಮಕ್ಕಳಲ್ಲಿ ಈ ಬಗ್ಗೆ ತಿಳುವಳಿಕೆ ಮೂಡಿಸುವುದು ಬಹಳ ಅಗತ್ಯವಾಗಿದ್ದು, ಇದು ಕೇವಲ ಜ್ಞಾನಾರ್ಜನೆಗೆ ಮಾತ್ರವಲ್ಲದೇ ಕಾರ್ಯರೂಪಕ್ಕೆ ತರುವಂತಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಡೆಂಗ್ಯೂ ನಿರ್ಮೂಲನೆಯ ಕುರಿತು ಪ್ರಾತ್ಯಕ್ಷಿಕೆ ಮತ್ತು ಕಿರುನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಬಟ್ವಾಡಿ, ಉಡುಪಿ ಲಯನ್ಸ್ ಕ್ಷಬ್ ಘಟಕದ ಅಧ್ಯಕ್ಷ ಲಯನ್.ಸುಂದರ ಕೋಟ್ಯಾನ್, ಉಡುಪಿ ತಾಲೂಕು ವೈದ್ಯಾಧಿಕಾರಿ ಡಾ. ನಾಗರತ್ನ, ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ಮಣಿಪಾಲ ಇಲ್ಲಿನ ಸಂಯೋಜಕಿ ಡಾ. ಆರತಿ ರಾವ್, ಯೂತ್ ರೆಡ್ಕ್ರಾಸ್ ಘಟಕ ಪೂರ್ಣಪ್ರಜ್ಞ ಕಾಲೇಜಿನ ಸಂಯೋಜಕ ಡಾ.ರಾಘವೇಂದ್ರ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು
ಜಿಲ್ಲಾ ಮಲೇರಿಯಾಧಿಕಾರಿ ಡಾ.ಪ್ರಶಾಂತ್ ಭಟ್ ಸ್ವಾಗತಿಸಿದರು. ಸತೀಶ್ ರಾವ್ ವಂದಿಸಿದರು.