ಡೆಂಗ್ಯೂ ನಿಯಂತ್ರಣ ಕ್ರಮಗಳನ್ನು ಅನುಸರಿಸಿ:ಡಾ.ಪ್ರಶಾಂತ್ ಭಟ್

ಉಡುಪಿ: ಡೆಂಗ್ಯೂ ಮತ್ತು ಚಿಕಂಗುನ್ಯಾ ರೋಗವನ್ನು ನಿಯಂತ್ರಿಸಲು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾ ಮಲೇರಿಯಾಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.

 ಅವರು ಗುರುವಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ರೋಗ ವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಚೇರಿ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ, ಮದರ್ ಆಫ್ ಸಾರೋಸ್ ಚರ್ಚ್ ಆವರಣದಲ್ಲಿ, ವಿಶ್ವ ಡೆಂಗ್ಯೂ ನಿಯಂತ್ರಣ ದಿನದ ಪ್ರಯುಕ್ತ ನಡೆದ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಡೆಂಗ್ಯೂ ಮತ್ತು ಚಿಕಂಗುನ್ಯಾ ರೋಗಗಳು ಸೊಳ್ಳೆಗಳಿಂದ ಹರಡಲಿದ್ದು, ಮನೆಯ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು, ನೀರು ನಿಲ್ಲದಂತೆ ನೋಡಿಕೊಳ್ಳುವ ಮೂಲಕ ಸೊಳ್ಳೆಗಳ ಬೆಳವಣಿಗೆ ನಿಯಂತ್ರಿಸಬಹುದು, ಮನೆಯಲ್ಲಿ ಸೊಳ್ಳೆ ಪರದೆಗಳನ್ನು ಬಳಸುವುದರ ಮೂಲಕ ಸಹ ಸೊಳ್ಳೆಗಳಿಂದ ರಕ್ಷಣೆ ಪಡೆಯಬಹುದು ಎಂದು ಡಾ. ಪ್ರಶಾಂತ್ ಭಟ್ ಹೇಳಿದರು.

    ಮದರ್ ಆಫ್ ಸಾರೋಸ್ ಚರ್ಚ್‍ನ ಫಾದರ್ ವಿಜಯ್ ಡಿಸೋಜಾ ಜಾಥಾಗೆ ಚಾಲನೆ ನೀಡಿ, ಉಡುಪಿ ಜಿಲ್ಲೆಯನ್ನು ಮಲೇರಿಯಾ ಮತ್ತು ಡೆಂಗ್ಯೂ ಮುಕ್ತ ಮಾಡುವಲ್ಲಿ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದು ಹೇಳಿದರು.

    ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಓಂ ಪ್ರಕಾಶ್ ಕಟ್ಟೀಮನಿ, ಜಿಲ್ಲಾ ಆರೋಗ್ಯ ಮೆಲ್ವಿಚಾರಕ ಕೆ.ಕೃಷ್ಣಪ್ಪ, ಕೀಟಶಾಸ್ತ್ರಜ್ಞೆ ಮುಕ್ತಾ ಆಚಾರ್ಯ ಮತ್ತಿತರರು ಉಪಸ್ಥಿತರಿದ್ದರು.ಮದರ್ ಆಫ್ ಸಾರೋಸ್ ಚರ್ಚ್‍ನಿಂದ, ಬನ್ನಂಜೆ ಮಾರ್ಗವಾಗಿ, ಬ್ರಹ್ಮಗಿರಿಯ ಲಯನ್ಸ್ ಭವನದ ವರೆಗೆ ಜಾಥಾ ನಡೆಯಿತು.