ಪೋಸ್ಟರ್ ಹಿಡಿದು ಏಕಾಂಗಿ ಹೋರಾಟ ನಡೆಸುತ್ತಿರುವ ಮಂಗಳೂರಿನ ಬಾಲಕ: ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿರುವ ಬಾಲಕನ ಕೂಗು ಆಡಳಿತಕ್ಕೆ ಕೇಳುವುದೆ?

ಮಂಗಳೂರು: ರಸ್ತೆಯಲ್ಲಿ ಗುಂಡಿಗೆ ಬಲಿಯಾದ ಇಂಜಿನಿಯರಿಂಗ್ ವಿದ್ಯಾರ್ಥಿ ಅತೀಶ್‌ನನ್ನು ಕಳೆದುಕೊಂಡ ಆತನ ಸ್ನೇಹಿತ ಲಿಖಿತ್ ಮಂಗಳೂರು ಮಹಾನಗರ ಪಾಲಿಕೆಯ ಮುಂದುಗಡೆ ನಿಂತು ಪೋಸ್ಟರ್ ಹಿಡಿದು ಒಬ್ಬಂಟಿಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲಿ ಒಂಟಿಯಾಗಿ ಪೋಸ್ಟರ್ ಹಿಡಿದು ರಸ್ತೆಯಲ್ಲಿ ‘ಸುರಕ್ಷಾ ಬಂಧನ’ಕ್ಕೆ ಆಗ್ರಹಿಸುತ್ತಿದ್ದಾರೆ. ತನ್ನ ಗೆಳೆಯನ ಸಾವಿಗೆ ನ್ಯಾಯ ಕೇಳುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಎದುರು ಪೋಸ್ಟರ್ ಹಿಡಿದು ನ್ಯಾಯ ಕೇಳುತ್ತಿರುವ ಈ ಬಾಲಕನ ಹೆಸರು ಲಿಖಿತ್ ರೈ. ಇತ್ತೀಚೆಗೆ ಆತನ ಸ್ನೇಹಿತ ಅತೀಶ್‌ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅತೀಶ್‌ ದ್ವಿಚಕ್ರ ವಾಹನದಿಂದ ರಸ್ತೆಗೆ ಎಸೆಯಲ್ಪಟ್ಟು ಸಾವನ್ನಪ್ಪಲು ರಸ್ತೆಯ ಹೊಂಡವೇ ಕಾರಣ ಎಂದು ಅತೀಶ್ ಸ್ನೇಹಿತರು ಪ್ರತಿಪಾದಿಸುತ್ತಿದ್ದಾರೆ.

ಹೀಗಾಗಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳಾದ ಇವರೆಲ್ಲ ತಮ್ಮ ಸಹಪಾಠಿಯ ಪರವಾಗಿ ಅತೀಶ್ ಗೆ ನ್ಯಾಯ ಕೊಡಿಸುವಂತೆ ಇಂಟರ್ ನೆಟ್ ನಲ್ಲಿ ಹೋರಾಟ ಆರಂಭಿಸಿದ್ದಾರೆ. ಹೀಗಾಗಿ ಲಿಖಿತ್ ರೈ ಕೂಡ ಪೋಸ್ಟರ್ ಮೂಲಕ ತಮ್ಮ ಸ್ನೇಹಿತನ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸುತ್ತಿದ್ದಾರೆ.

ಲಿಖಿತ್ ರೈ ಅವರ ಏಕವ್ಯಕ್ತಿ ಪ್ರತಿಭಟನೆಗೆ ನಾಗರಿಕರಿಂದಲೂ ಬೆಂಬಲ ವ್ಯಕ್ತವಾಗಿದೆ. ಲಿಖಿತ್ ರೈ ಬಂಟ್ವಾಳದಿಂದ ಸುರತ್ಕಲ್ ವರೆಗೆ ಟೋಲ್ ರಸ್ತೆಗಳನ್ನು ಯೋಜಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಈ ಮೂಲಕ ಅತೀಶ್ ಸಾವಿಗೆ ನ್ಯಾಯ ಸಿಗಬೇಕು, ಅತೀಶ್ ನಂತೆ ಇನ್ಯಾವ ದ್ವಿಚಕ್ರ ವಾಹನ ಸವಾರ ಕೂಡಾ ಬಲಿಯಾಗದಂತೆ ತಡೆಯಬೇಕು ಎಂಬುದು ಲಿಖಿತ್ ರೈ ಅವರ ಬೇಡಿಕೆ.

ಸಾರ್ವಜನಿಕರಿಂದ ತೆರಿಗೆ ವಸೂಲು ಮಾಡುವ ಆಡಳಿತಗಳು, ಸರಕಾರಗಳು ಸ್ಥಳೀಯ ಶಾಸಕ ಸಂಸದರು ಜನರ ಪ್ರಾಣಹರಣ ಮಾಡುವ ಇಂತಹ ರಸ್ತೆಗಳ ಬಗ್ಗೆ ಕಿಂಚಿತ್ತೂ ಗಮನ ಕೊಡದೆ ತಮ್ಮ ಸ್ವಾರ್ಥಪರ ರಾಜಕರಾರಣದಲ್ಲೇ ಮುಳುಗಿರುವಾಗ ತನ್ನ ಗೆಳೆಯನ ಸಾವಿಗಾಗಿ ನ್ಯಾಯ ಕೇಳುತ್ತಿರುವ ಲಿಖಿತ್ ನ ಕೂಗು ಆಳುಗರಿಗೆ ಕೇಳಬಹುದೆ?