ಉಡುಪಿ: ದೇವಾಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪಿಸಿ, ಸಮುದಾಯಕ್ಕೆ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂಬ ಉದ್ದೇಶದಿಂದ ವಿಶ್ವ ದೇವಾಡಿಗ ಮಹಾಮಂಡಳ, ಬಾರ್ಕೂರು ವತಿಯಿಂದ ಡಿಸೆಂಬರ್ 20ರಂದು ಉಡುಪಿಯ ಚಿಟ್ಟಾಡಿಯ ಬಯಲು ರಂಗಮಂದಿರದಲ್ಲಿ ವಿಶ್ವ ದೇವಾಡಿಗ ಮಹಾಧಿವೇಶನ ಆಯೋಜಿಸಲಾಗಿದೆ ಎಂದು ಮಹಾಮಂಡಳದ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾಧಿವೇಶನದ ಕಾರ್ಯಾಲಯವನ್ನು ಜುಲೈ 5ರಂದು ಉದ್ಘಾಟಿಸಲಾಗುವುದು.
ಮಹಾಧಿವೇಶನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಸಮಾಜಕ್ಕೆ ರಾಜ್ಯ ಬಜೆಟ್‌ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡುವಂತೆ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದು ಹೇಳಿದರು.
ದೇವಾಡಿಗ ಸಮಾಜವು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಶತಮಾನಗಳಿಂದ ನೆಲೆಸಿರುವ ಹಿಂದುಳಿದ ಸಮುದಾಯವಾಗಿದೆ. ಸಮುದಾಯದವರು ಮುಖ್ಯವಾಗಿ ಕೃಷಿ ಕಾರ್ಮಿಕರಾಗಿದ್ದು, ದೇವಾಲಯಗಳು ಹಾಗೂ ಧಾರ್ಮಿಕ ಕೇಂದ್ರಗಳಲ್ಲಿ ವಾದ್ಯಸೇವೆ, ಸಂಗೀತ ಸೇವೆ, ಶುಚಿತ್ವ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ದೇವಾಡಿಗ ಸಮಾಜದಲ್ಲಿ ಸೇರಿಗಾರ, ಮೊಯಿಲಿ, ದೇವಾಡಿಗ ಹಾಗೂ ಶೇರಿಗಾರ ಪ್ರಮುಖ ಉಪನಾಮಗಳಾಗಿವೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರ ಸಮುದಾಯದ ಜನಸಂಖ್ಯೆ 5 ಲಕ್ಷಕ್ಕೂ ಅಧಿಕವಿದ್ದು, ವಾಸ್ತವಿಕವಾಗಿ 8 ಲಕ್ಷಕ್ಕೂ ಮೀರಿರಬಹುದೆಂದು ಅಂದಾಜಿಸಲಾಗಿದೆ ಎಂದರು.
ಸಮಾಜದ ಸಹಕಾರದಿಂದ 2017–18ರಲ್ಲಿ ಬಾರ್ಕೂರಿನಲ್ಲಿ ಶ್ರೀ ಏಕನಾಥೇಶ್ವರಿ ದೇವಸ್ಥಾನವನ್ನು ನಿರ್ಮಿಸಲಾಗಿದ್ದು, 2023ರಲ್ಲಿ ವಿಶ್ವ ದೇವಾಡಿಗ ಮಹಾಮಂಡಳವನ್ನು ಸ್ಥಾಪಿಸಲಾಗಿದೆ. ಹಿಂದಿನ ಹಾಗೂ ಹಾಲಿ ರಾಜ್ಯ ಸರ್ಕಾರಗಳಿಗೆ ಅಭಿವೃದ್ಧಿ ನಿಗಮ ಸ್ಥಾಪನೆ ಕುರಿತಂತೆ ಮನವಿ ಸಲ್ಲಿಸಲಾಗಿದ್ದರೂ ಇದುವರೆಗೆ ಬೇಡಿಕೆ ಈಡೇರಿಲ್ಲ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಗೌರವ ಪ್ರಧಾನ ಕಾರ್ಯದರ್ಶಿ ಹಿರಿಯಡಕ ಮೋಹನ್ ದಾಸ, ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ, ಜೊತೆ ಕಾರ್ಯದರ್ಶಿ ಯಾದವ ದೇವಾಡಿಗ ಉಪಸ್ಥಿತರಿದ್ದರು.

















