ಜಾಗಟೆ, ಗಂಟೆ ಬಾರಿಸಿ ಜಿಲ್ಲಾಸ್ಪತ್ರೆ ಆರಂಭಕ್ಕೆ ಆಗ್ರಹ

ಉಡುಪಿ: ಅಜ್ಜರಕಾಡಿನ ನೂತನ ಜಿಲ್ಲಾಸ್ಪತ್ರೆಯನ್ನು ಶೀಘ್ರವೇ ಸಾರ್ವಜನಿಕರ ಸೇವೆಗೆ ಸಮರ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಆಸ್ಪತ್ರೆಯ ಮುಂಭಾಗ ಏಳು ದಿನಗಳ ಅಹೋರಾತ್ರಿ ಧರಣಿ ಆರಂಭಿಸಲಾಯಿತು.

ನೂತನ ಜಿಲ್ಲಾಸ್ಪತ್ರೆ ನಿರ್ಮಾಣಗೊಂಡು ವರ್ಷ ಕಳೆದರೂ ಇನ್ನೂ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಆಸ್ಪತ್ರೆಯಲ್ಲಿ ಅಗತ್ಯ ಯಂತ್ರೋಪಕರಣ, ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿಯನ್ನು ತಕ್ಷಣ ನಿಯೋಜಿಸಿ ಸೇವೆ ಆರಂಭಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು. ಈ ವೇಳೆ ಜಾಗಟೆ ಹಾಗೂ ಗಂಟೆ ಬಾರಿಸುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಎಚ್ಚರಿಸಲಾಯಿತು.

ಕರವೇ ಗೌರವಾಧ್ಯಕ್ಷ ಅನ್ಸರ್ ಅಹಮದ್ ಮಾತನಾಡಿ, “ಜಾಗಟೆ ಹಾಗೂ ಗಂಟೆ ಬಾರಿಸುವ ಮೂಲಕ ನಿದ್ದೆಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯ ಮಾಡುತ್ತಿದ್ದೇವೆ. ಮೊದಲ ಮೂರು ದಿನಗಳ ಧರಣಿ ಸಾಂಕೇತಿಕವಾಗಿದ್ದು, ಬಳಿಕ ಸಂಘಟನೆಯ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನ ಸೆಳೆಯಲಿದ್ದಾರೆ” ಎಂದರು. ಏಳು ದಿನಗಳೊಳಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕರವೇ ರಾಜ್ಯ ಸಂಚಾಲಕ ಪ್ರಸನ್ನ ಶೆಟ್ಟಿ ಮಾತನಾಡಿ, ಯಾವುದೇ ಖಾಸಗಿ ಲಾಬಿಗೆ ಮಣಿಯದೆ ರಾಜ್ಯ ಸರ್ಕಾರ ಕೂಡಲೇ ನೂತನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಆರಂಭಿಸಬೇಕು. ಇದರಿಂದ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯ ಸೌಲಭ್ಯ ದೊರೆಯಲಿದೆ. ಏಳು ದಿನಗಳೊಳಗೆ ಸೇವೆ ಆರಂಭಿಸದಿದ್ದರೆ ಮುಂದಿನ ಹಂತದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.