ಉಡುಪಿ ಜೂನ್ 6: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ, ಕೋವಿಡ್-19 ವಿರುದ್ದ ಹೋರಾಟದಲ್ಲಿ ಶ್ರಮಿಸುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 2600 ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರಿಗೆ ಹಾಲಿನ ಉತ್ಪನ್ನಗಳ ಕಿಟ್ ವಿತರಣೆಯ ಕಾರ್ಯಕ್ರಮಕ್ಕೆ ಉಡುಪಿ-ಚಿಕ್ಕಮಗಳೂರು ಸಂಸದ ಶೋಭಾ ಕರಂದ್ಲಾಜೆ , ಉಡುಪಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಕಿಟ್ ವಿತರಿಸುವ ಚಾಲನೆ ನೀಡಿದರು.
ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿದ ಸಂಸದರು, ಕೋವಿಡ್-19 ವಿರುದ್ದದ ಹೋರಾಟದಲ್ಲಿ ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿರುವ ಕೆಲಸ ಅತ್ಯಂತ ಪ್ರಮುಖವಾಗಿದ್ದು, ಇದಕ್ಕಾಗಿ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ಅಭಿನಂದಿಸುವುದಾಗಿ ಹೇಳಿದರು.
ದ.ಕನ್ನಡ ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ್ ಹೆಗಡೆ ಮಾತನಾಡಿ, ಕೋವಿಡ್-19 ಅವಧಿಯಲ್ಲಿ ಒಕ್ಕೂಟದ ವ್ಯಾಪ್ತಿಯಲ್ಲಿನ ಸಹಕರ ಸಂಘಗಳಿಗೆ 35 ರೂ. ಲಕ್ಷಗಳ ಪ್ರೋತ್ಸಾಹ ಧನ ನೀಡಿದೆ, ಒಕ್ಕೂಟದಲ್ಲಿನ ಗುತ್ತಿಗೆ ನೌಕರರಿಗೆ 40 ಲಕ್ಷ ರೂ ಗಳ ನೆರವು ನೀಡುವುದರ ಜೊತೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಲಕ್ಷ ರೂ ಗಳನ್ನು ನೀಡಿದ್ದು, ಕೋವಿಡ್ 19 ವಿರುದ್ದ ಅವಿಭಜಿತ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಸಲ್ಲಿಸುತ್ತಿರುವ ಸೇವೆಗಾಗಿ ಸುಮಾರು 15 ಲಕ್ಷ ರೂ ಗಳಿಗೆ ಮಿಕ್ಕಿದ ಆಹಾರ ಉತ್ಪನ್ನಗಳ ಕಿಟ್ ಗಳನ್ನು ನೀಡುತ್ತಿರುವುದಾಗಿ ತಿಳಿಸಿದರು.
ಕೆಎಂಎಫ್ ನಿಂದ ವಿತರಿಸಲಾದ ಕಿಟ್ ನಲ್ಲಿ 90 ದಿನಗಳ ದೀರ್ಘಕಾಲ ಬಾಳಿಕೆ ಬರುವ ತೃಪ್ತಿ ಹಾಲು ಸೇರಿದಂತೆ ವಿವಿಧ ಉತ್ಪನ್ನಗಳನ್ನು ಆಶಾ ಕಾರ್ಯಕರ್ತೆರಿಗೆ ನೀಡಲಾಯಿತು.
ಶಾಸಕ ರಘುಪತಿ ಭಟ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಪಂ ಸಿಇಓ ಪ್ರೀತಿ ಗೆಹಲೋತ್, ದ.ಕನ್ನಡ ಸಹಕಾರಿ ಹಾಲು ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ ಚಂದ್ರ ಶೆಟ್ಟಿ, ನಿರ್ದೇಶಕಿ ಸ್ಮಿತಾ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕ ಡಾ. ಜಿ.ವಿ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.